ಲೋಕಬಂಧು ನ್ಯೂಸ್ | ನವದೆಹಲಿ, ಜೂ.10
ಭಾರತದ ರಾಜಕೀಯ ಇತಿಹಾಸದಲ್ಲಿ 2026ರ ಜೂನ್ 10 ಮಹತ್ವದ ದಿನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರ ದೀರ್ಘಕಾಲದ ಆಡಳಿತದ ದಾಖಲೆಯನ್ನು ಹಿಂದಿಕ್ಕಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿ ಅಧಿಕಾರದಲ್ಲಿರುವ ಪ್ರಧಾನಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಜೂನ್ 10ರ ವೇಳೆಗೆ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ ನಿರಂತರ 4,399 ದಿನಗಳ ಅಧಿಕಾರಾವಧಿ ಪೂರ್ಣಗೊಳಿಸಿದ್ದು, ಆ ಮೂಲಕ ನೆಹರೂ ಅವರ 4,398 ದಿನಗಳ ದಾಖಲೆಯನ್ನು ಮೀರಿದ್ದಾರೆ. ಈ ಸಾಧನೆ ಭಾರತದ ಪ್ರಜಾಪ್ರಭುತ್ವದ ನಿರಂತರತೆ, ಮತದಾರರ ವಿಶ್ವಾಸ ಹಾಗೂ ರಾಜಕೀಯ ಸ್ಥಿರತೆಯ ಪ್ರತೀಕ ಎಂದು ಪರಿಗಣಿಸಲಾಗಿದೆ.
ನೆಹರೂ ದಾಖಲೆ ಹಿಂದಿಕ್ಕಿದ ಮೋದಿ
1952ರ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಜವಾಹರಲಾಲ್ ನೆಹರೂ 1952ರ ಮೇ 13ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ 1964ರ ಮೇ 27ರ ವರೆಗೆ ನಿರಂತರ 4,398 ದಿನಗಳ ಕಾಲ ಅಧಿಕಾರದಲ್ಲಿದ್ದರು. ಸ್ವತಂತ್ರ ಭಾರತದ ಚುನಾವಣಾ ವ್ಯವಸ್ಥೆಯಡಿ ಆ ದಾಖಲೆ ದಶಕಗಳ ಕಾಲ ಅಜೇಯವಾಗಿತ್ತು. ಇದೀಗ ನರೇಂದ್ರ ಮೋದಿ 4,399ನೇ ದಿನ ಪೂರೈಸುವ ಮೂಲಕ ಆ ದಾಖಲೆಯನ್ನು ಅಧಿಕೃತವಾಗಿ ಹಿಂದಿಕ್ಕಿದ್ದಾರೆ.
2014ರಿಂದ ನಾಯಕತ್ವದ ಪಯಣ
2014ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಅವರು ಮೇ 26, 2014ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಇನ್ನಷ್ಟು ಬಲಿಷ್ಠ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೆ ಮರಳಿದರು.
ಮತ್ತೆ 2024ರ ಲೋಕಸಭಾ ಚುನಾವಣೆ ಬಳಿಕ 2024ರ ಜೂನ್ 9ರಂದು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅಪೂರ್ವ ರಾಜಕೀಯ ಸಾಧನೆ ಮಾಡಿದ್ದಾರೆ. ಕಳೆದ 12 ವರ್ಷಗಳಲ್ಲಿ ಕೇಂದ್ರದಲ್ಲಿ ನಿರಂತರ ಆಡಳಿತ ನಡೆಸಿರುವ ಮೊದಲ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಎನ್‌ಡಿಎ ಸಂಭ್ರಮ ಪ್ರಧಾನಿ ಮೋದಿ ಅವರ 12 ವರ್ಷಗಳ ಆಡಳಿತ ಹಾಗೂ ಐತಿಹಾಸಿಕ ದಾಖಲೆಯನ್ನು ಸಂಭ್ರಮಿಸಲು ಎನ್‌ಡಿಎ ವತಿಯಿಂದ ನವದೆಹಲಿಯಲ್ಲಿ ವಿಶೇಷ ಸಮಾವೇಶ ಆಯೋಜಿಸಲಾಗಿದೆ. ಸಭೆಯಲ್ಲಿ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮೈತ್ರಿಕೂಟದ ಪಕ್ಷಗಳ ಅಧ್ಯಕ್ಷರು ಹಾಗೂ ಹಿರಿಯ ನಾಯಕರು ಭಾಗವಹಿಸಿ ಪ್ರಧಾನಿ ಮೋದಿ ನಾಯಕತ್ವವನ್ನು ಅಭಿನಂದಿಸಲಿದ್ದಾರೆ.
ಜಾಗತಿಕ ನಾಯಕರ ಅಭಿನಂದನೆ
ಮೋದಿ ಅವರ ಈ ಸಾಧನೆಗೆ ಹಲವು ರಾಷ್ಟ್ರಗಳ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಜಾಗತಿಕ ಪ್ರಭಾವ ಹೆಚ್ಚಿಸುವಲ್ಲಿ ಹಾಗೂ ಜಾಗತಿಕ ದಕ್ಷಿಣ ರಾಷ್ಟ್ರಗಳ ಧ್ವನಿಯಾಗಿ ಕಾರ್ಯನಿರ್ವಹಿಸುವಲ್ಲಿ ಮೋದಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹಲವು ವಿದೇಶಿ ನಾಯಕರು ಪ್ರಶಂಸಿಸಿದ್ದಾರೆ.
ಮೋದಿ ಅವರ ಈ ಸಾಧನೆ ಕೇವಲ ಅಧಿಕಾರದ ಅವಧಿಯ ದಾಖಲೆಯಷ್ಟೇ ಅಲ್ಲ, ಮೂರು ಸತತ ಸಾರ್ವತ್ರಿಕ ಚುನಾವಣೆಗಳಲ್ಲಿ ಜನಾದೇಶ ಪಡೆದು ಅಧಿಕಾರ ಉಳಿಸಿಕೊಂಡಿರುವ ರಾಜಕೀಯ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ಕಳೆದ ದಶಕದಲ್ಲಿ ಮೂಲಸೌಕರ್ಯ, ಡಿಜಿಟಲ್ ಆಡಳಿತ, ಕಲ್ಯಾಣ ಯೋಜನೆಗಳು ಹಾಗೂ ಭಾರತದ ಅಂತರರಾಷ್ಟ್ರೀಯ ಪ್ರಭಾವ ವಿಸ್ತರಣೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ ಎಂದು ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಸ ಅಧ್ಯಾಯಕ್ಕೆ ಸಾಕ್ಷಿ
ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಪ್ರಜಾಪ್ರಭುತ್ವದ ಮೂಲಕ ನಿರಂತರವಾಗಿ ಜನಮತ ಪಡೆದು ಅಧಿಕಾರದಲ್ಲಿರುವ ಈ ಸಾಧನೆ ದೇಶದ ರಾಜಕೀಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳಲಿದೆ.