ಲೋಕಬಂಧು ನ್ಯೂಸ್ | ಉಜಿರೆ, ಜೂ.10
ತುಳುನಾಡಿನ ದೈವಾರಾಧನೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಶ್ರೀಗಣ ಕಿರುಚಿತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಜೂನ್ 9ರಂದು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಕಿರುಚಿತ್ರ ವೀಕ್ಷಿಸಿದ ಹೆಗ್ಗಡೆ ದಂಪತಿ, ತುಳುನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ದೈವಾರಾಧನೆಯ ಮಹತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿರುವ ಯುವಕರ ಪ್ರಯತ್ನವನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಕಿರುಚಿತ್ರ ವೀಕ್ಷಿಸಿ, ಚಿತ್ರ ಕಲಾವಿದರು ಹಾಗೂ ತಾಂತ್ರಿಕ ತಂಡಕ್ಕೆ ಶುಭ ಹಾರೈಸಿದರು.
ಎಸ್.ಡಿ.ಎಂ ಕಲಾಕೇಂದ್ರದ ಪೋಷಕಿ ಸೋನಿಯಾ ಯಶೋವರ್ಮ ಕೂಡಾ ಕಿರುಚಿತ್ರ ವೀಕ್ಷಿಸಿ ಯುವಕರ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು.
ಸುಮಾರು 15 ನಿಮಿಷಗಳ ಅವಧಿಯ ಈ ಕಿರುಚಿತ್ರ ತುಳುನಾಡಿನ ದೈವಾರಾಧನೆಯ ಹಿನ್ನೆಲೆಯ ಕಥಾವಸ್ತುವನ್ನೊಳಗೊಂಡಿದ್ದು, ಯುವಕರು ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದೆ.
ಕಿರುಚಿತ್ರದ ನಿರ್ಮಾಪಕರಾಗಿ ಕಾರ್ತಿಕ್ ಸುಬ್ರಹ್ಮಣ್ಯ, ರಚನೆ ಹಾಗೂ ನಿರ್ದೇಶನ ನೂತನ ಅಮೀನ್, ಕಥೆ ಮತ್ತು ಸಂಭಾಷಣೆ ಸುಜಿತ್ ಸೂರ್ಯ ನಿರ್ವಹಿಸಿದ್ದಾರೆ. ಭೂಷಣ್ ಪೂಜಾರಿ ಸಂಗೀತ ಸಂಯೋಜನೆ, ಸಮರ್ಥನ್ ರಾವ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗಗನ್ ರಾಜ್ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಸುಬ್ರಹ್ಮಣ್ಯದ ಸ್ಥಳಿಯರಾದ ರೋಹಿತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಕಾರ್ತಿಕ್ ಶೋಭಿತ್, ಕಿರಣ್, ಜಯರಾಮ್ , ರಾಜಾರಾಮ್ ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಿರುಚಿತ್ರ ನಿರ್ಮಾಣದಲ್ಲಿ ಸುನಿಲ್ ಶೆಟ್ಟಿ ಕಲ್ಕೊಪ್ಪ ಹಾಗೂ ಯಶವಂತ್ ಬೆಳ್ತಂಗಡಿ (ನೀನಾಸಂ) ಸಲಹೆ ಮತ್ತು ಸಹಕಾರ ನೀಡಿದ್ದು, ಯುವ ಕಲಾವಿದರ ಈ ಪ್ರಯತ್ನಕ್ಕೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಒದಗಿಸಿದ್ದಾರೆ.
ಯುವಕರ ಸೃಜನಶೀಲತೆ, ಸಾಂಸ್ಕೃತಿಕ ಬದ್ಧತೆ ಮತ್ತು ತುಳುನಾಡಿನ ಪರಂಪರೆ ಬಗೆಗಿನ ಅಭಿಮಾನವನ್ನು ಪ್ರತಿಬಿಂಬಿಸುವ ‘ಶ್ರೀಗಣ’ ಕಿರುಚಿತ್ರ ಕುಕ್ಕೆಶ್ರೀ ಕ್ರೀಯೇಷನ್ಸ್ ಎಂಬ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
