ಲೋಕಬಂಧು ನ್ಯೂಸ್ ಉಡುಪಿ, ಜು.21
ದೇಶದಲ್ಲಿ ಮತ್ತೆ ಕೊರೋನಾ ಭೀತಿ ಉಂಟಾಗಿದ್ದು, ಜನರು ಯಾವುದೇ ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ. ಆದರೆ, ಎಚ್ಚರಿಕೆಯಿಂದಿರಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪರೀಕ್ಷೆ ನಡೆಸುವಾಗ ಕೆಲವೊಂದು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದು ಸಹಜ. ಸಾವಿರ ವರ್ಷ ಕಳೆದರೂ ಕೆಲವು ವೈರಸ್‌ಗಳು ಪರಿಸರದಲ್ಲಿ ಇರುತ್ತವೆ. ಗಾಳಿಯಲ್ಲೂ ಕೆಲವು ವೈರಸ್‌ಗಳು ಇರುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾತ್ರ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ವೈರಸ್‌ಗಿಂತ ನಾವು ಗಟ್ಟಿಯಾಗಬೇಕು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಉತ್ತಮ ಆಹಾರ ಪದ್ಧತಿ, ಆರೋಗ್ಯಕರ ಜೀವನ ಶೈಲಿ ಹಾಗೂ ಸ್ವಚ್ಛತೆಯನ್ನು ರೂಢಿಸಿಕೊಳ್ಳುವಂತೆ ಅವರು ಜನರಿಗೆ ಸಲಹೆ ನೀಡಿದರು.
ಡೆಂಗ್ಯೂ, ಎಚ್1ಎನ್1 ಹಾಗೂ ಕೋವಿಡ್ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿದರು. ವಿಮಾನ ನಿಲ್ದಾಣಗಳಲ್ಲಿ ಅಗತ್ಯವಿರುವ ಟೆಸ್ಟಿಂಗ್ ಮತ್ತು ಸ್ಟ್ರೀನಿಂಗ್ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನಸಾಮಾನ್ಯರು ಹಾಗೂ ಸಂಘ-ಸಂಸ್ಥೆಗಳು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸೊಳ್ಳೆಗಳ ಉತ್ಪತ್ತಿ ತಡೆಯಲು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರಸ್ತುತ ಇದು ಸಾಂಕ್ರಾಮಿಕ ರೋಗಗಳ ಕಾಲಘಟ್ಟವಾಗಿದ್ದು, ವೈರಲ್ ಜ್ವರಗಳ ಪ್ರಮಾಣ ಹೆಚ್ಚಾಗುವ ಸಮಯವಾಗಿದೆ. ಸೊಳ್ಳೆಗಳ ಉತ್ಪಾದನೆಯಿಂದ ಡೆಂಗ್ಯೂ ಸೇರಿದಂತೆ ಹಲವು ರೋಗಗಳು ಹೆಚ್ಚಾಗುತ್ತಿವೆ ಎಂದರು.
ಜ್ವರ ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬಿಸಿ ನೀರು ಕುಡಿಯುವುದು ಸೇರಿದಂತೆ ಆರೋಗ್ಯ ಕಾಳಜಿಗೆ ಆದ್ಯತೆ ನೀಡಬೇಕು ಎಂದು ಸಚಿವ ಖಾದರ್ ಸಲಹೆ ನೀಡಿದರು.
ಡೆಂಗ್ಯೂಗೆ ಲಸಿಕೆ ಅಭಿವೃದ್ಧಿ ಕುರಿತು ಈಗಾಗಲೇ ಮಾಹಿತಿ ಬಂದಿದ್ದು, ಆ ಬಗ್ಗೆ ತಾನು ಕೂಡ ಸಭೆ ನಡೆಸಿರುವುದಾಗಿ ಸಚಿವ ಯು.ಟಿ.ಖಾದರ್ ಹೇಳಿದರು.
ಡೆಂಗ್ಯೂ ಲಸಿಕೆ ನಮಗೆ ಸಾಧ್ಯವಾಗುತ್ತದೆಯೇ, ಅದರ ಪರಿಣಾಮಗಳು ಏನು ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ. ಆರೋಗ್ಯದ ಮೇಲೆ ಅದರ ಪರಿಣಾಮಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದುಲವರು ತಿಳಿಸಿದರು.