ಲೋಕಬಂಧು ನ್ಯೂಸ್ ಪಡುಬಿದ್ರಿ, ಜು.21
ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಾಲಕನೋರ್ವನನ್ನು ಪಡುಬಿದ್ರಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.2002ರ ಸೆ.7ರಂದು ಬಡಾ ಗ್ರಾಮದ ಮೂಳೂರು ಮಸೀದಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಂಎಚ್ 12ಎಫ್ಎ6993 ಮಿನಿ ಗೂಡ್ಸ್ ಲಾರಿಯನ್ನು ಚಾಲಕ ಮಹಾರಾಷ್ಟ್ರದ ಪುಣೆ ನಿವಾಸಿ ವಿಲಾಸ್ ಶಿಂಧೆ ಎಂಬಾತ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕನಿಗೆ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿದ್ದು ಆ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯ 3 ಮೂರು ತಿಂಗಳ ಜೈಲುವಾಸ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿತ್ತು.
ನ್ಯಾಯಾಲಯದ ತೀರ್ಪಿನ ಬಳಿಕ ಅಪರಾಧಿ ಲಾರಿ ಚಾಲಕ ವಿಲಾಸ್ ಶಿಂಧೆ ಕಳೆದ 23 ವರ್ಷದಿಂದ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ಆತನ ವಿರುದ್ಧ ಎಲ್.ಪಿ.ಸಿ. ವಾರಂಟ್ ಹೊರಡಿಸಿತ್ತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯಕ್, ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಮಾರ್ಗದರ್ಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್ಐ ಸಕ್ತಿವೇಲು ಮತ್ತು ಅನಿಲ್ ಕುಮಾರ್ ಟಿ. ನಾಯಕ್ ಸೂಚನೆಯಂತೆ ಸಿಬ್ಬಂದಿಗಳಾದ ಎಎಸ್ಐ ರಾಜೇಶ್ ಪಿ, ಎಚ್.ಸಿ. ಕೃಷ್ಣಪ್ರಸಾದ್, ಪಿಸಿ ಸಂದೇಶ್ ಭಂಡಾರಿ ಅಪರಾಧಿ ವಿಲಾಸ್ ಶಿಂಧೆ ಪುಣೆಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಲ್ಲಿಗೆ ತೆರಳಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.