ಆಗಸ್ಟ್ ಅಂತ್ಯದೊಳಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ

ಲೋಕಬಂಧು ನ್ಯೂಸ್ ಉಡುಪಿ, ಜು.25
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಬಲಪಡಿಸುವ ಉದ್ದೇಶದಿಂದ ಎಐಸಿಸಿ ರೂಪಿಸಿರುವ `ಸೃಜನ ಸಂಘಟನಾ ಅಭಿಯಾನ'ದಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಐಸಿಸಿ ವೀಕ್ಷಕ ಹಿಮ್ಮತ್ ಸಿಂಗ್ ಪಟೇಲ್ ತಿಳಿಸಿದ್ದಾರೆ.ಶನಿವಾರ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ನಿರ್ದೇಶನದಂತೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನನ್ನು ತಲುಪುವ ನಾಯಕತ್ವವನ್ನು ಆಯ್ಕೆ ಮಾಡುವುದು ನಮ್ಮ ಉದ್ದೇಶ.

ಉಡುಪಿ ಜಿಲ್ಲೆಯಲ್ಲಿ 10 ಬ್ಲಾಕ್'ಗಳಿದ್ದು ಇಲ್ಲಿನ ಕಾರ್ಯಕರ್ತರ ಅಭಿಪ್ರಾಯ, ಅಭ್ಯರ್ಥಿಯ ಬಹುಮತದ ಬೆಂಬಲ, ಪಕ್ಷದ ಮೇಲಿನ ನಿಷ್ಠೆ ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗಿರುವ ನೇರ ಸಂಪರ್ಕ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್‌ನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ತಳಮಟ್ಟದ ಕಾರ್ಯಕರ್ತರೇ ನಿರ್ಧರಿಸಲಿದ್ದಾರೆ.


ಎಐಸಿಸಿ ಸಿದ್ಧಪಡಿಸಿರುವ ವ್ಯವಸ್ಥಿತ ಮಾದರಿಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವೀಕ್ಷಕರ ವರದಿ ಸಿದ್ಧಪಡಿಸಲು ಕನಿಷ್ಠ 10 ದಿನಗಳು ಬೇಕಾಗುತ್ತದೆ. ವರದಿ ಸಲ್ಲಿಕೆಯಾದ ಬಳಿಕ ಅದರ ವಿಶ್ಲೇಷಣೆ ನಡೆಸಿ, ಪರಿಶೀಲನಾ ಸಭೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಆಗಸ್ಟ್ ಅಂತ್ಯದೊಳಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದವರು ತಿಳಿಸಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು ಎಂದು ಹಿಮ್ಮತ್ ಸಿಂಗ್ ಪಟೇಲ್ ಹೇಳಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪಕ್ಷ ಪ್ರಮುಖರಾದ ಶಾಲೆಟ್ ಪಿಂಟೊ, ಕಿಶನ್ ಹೆಗ್ಡೆ ಕೊಳ್ಕೆಬೈಲು, ರಮೇಶ ಕಾಂಚನ್, ಹರೀಶ ಕಿಣಿ ಅಲೆವೂರು, ಪ್ರಸಾದರಾಜ್ ಕಾಂಚನ್, ಮಹಿಳಾ ಕಾಂಗ್ರೆಸ್ ‌ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮೊದಲಾದವರಿದ್ದರು.