ಸುದ್ದಿಯ ನಿಖರತೆ ಇಂದಿನ‌ ಅಗತ್ಯ

ಲೋಕಬಂಧು ನ್ಯೂಸ್ ಕಾರ್ಕಳ, ಜು.23
ಇಂದಿನ ಡಿಜಿಟಲ್ ಯುಗದಲ್ಲಿ ಸುದ್ದಿಗಳು ಅತ್ಯಂತ ಧಾವಂತ ಹಾಗೂ ವೇಗದಿಂದ ಸಾಗುತ್ತಿವೆ. ಮಾಹಿತಿ ತಂತ್ರಜ್ಞಾನ ಬೆಳೆದಂತೆಲ್ಲಾ ಸುದ್ದಿಗಳ ಹರಿವು ಹೆಚ್ಚಾಗಿದ್ದು, ಈ ಹಂತದಲ್ಲಿ ಪ್ರಸಾರವಾಗುವ ಮಾಹಿತಿಗಳಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ಸರಿಯಾಗಿ ವಿಮರ್ಶಿಸಿ ಜನರಿಗೆ ತಲುಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನೇತೃತ್ವದಲ್ಲಿ ಇಲ್ಲಿನ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಸಹಯೋಗದಲ್ಲಿ ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಜರ್ಮನಿಯಿಂದ ಆಗಮಿಸಿ ಕರಾವಳಿಯ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ, ಇಲ್ಲಿನ ಸ್ಥಳೀಯ ಭಾಷೆಯನ್ನು ಕಲಿತು ಪತ್ರಿಕಾ ರಂಗವನ್ನು ಹುಟ್ಟುಹಾಕಿದ ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆ ಇಂದಿನ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿಯಾಗಿದೆ ಎಂದವರು ಹೇಳಿದರು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಅತ್ಯಂತ ಗೌರವಯುತ ಸ್ಥಾನವಿದೆ. ಸಮಾಜದ ನಾಲ್ಕನೇ ಅಂಗವಾಗಿ ಕಾವಲುಗಾರನಂತೆ ಕೆಲಸ ಮಾಡುವುದು ಮಾಧ್ಯಮಗಳ ಮೇಲಿರುವ ದೊಡ್ಡ ಜವಾಬ್ದಾರಿ ಎಂದರು.


ಮಾಧ್ಯಮ ರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಲು ಸಾಧ್ಯ ಎಂದು ಗಫೂರ್ ಅಭಿಪ್ರಾಯ ವ್ಯಕ್ತಪಡಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿರಿಯ ಪತ್ರಕರ್ತ ಬಿಪಿನ್ ಚಂದ್ರಪಾಲ್ ನಕ್ರೆ, ಇಂದು ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ಟಿವಿ ಹಾಗೂ ಮೊಬೈಲ್ ಪರದೆ ಮೇಲೆ ಬರುವ ಸುದ್ದಿಗಳು ಸತ್ಯ- ಸುಳ್ಳುಗಳ ಗೊಂದಲಕ್ಕೆ ಈಡಾಗಬಹುದು. ಡಿಜಿಟಲ್ ಮಾಧ್ಯಮದಲ್ಲಿ ಸುಳ್ಳು ಸುದ್ದಿಯನ್ನು ಅಳಿಸಬಹುದು ಅಥವಾ ಅಡಗಿಸಬಹುದು. ಆದರೆ, ಮುದ್ರಣ ಪತ್ರಿಕೆಗಳಲ್ಲಿ ಅದು ಸಾಧ್ಯವಿಲ್ಲ. ಪತ್ರಿಕೆಗಳಲ್ಲಿ ಆಳವಾದ ಸತ್ಯ ಶೋಧನೆ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಪತ್ರಿಕಾ ರಂಗ ಮತ್ತೆ ಶಕ್ತಿಯುತವಾಗಿ ಮೂಡಿಬರುತ್ತಿರುವುದು ಸಮಾಧಾನಕರ ಸಂಗತಿ ಎಂದರು.


ದೇಶದ ಭವಿಷ್ಯ ನಿರ್ಮಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾದ ಮಾಧ್ಯಮಗಳ ಜವಾಬ್ದಾರಿ. ಆದರೆ, ಈ ನಾಲ್ಕನೇ ಸ್ತಂಭದ ಸ್ವರೂಪ ಕೆಲವೊಮ್ಮೆ ಬದಲಾಗಿ ಸ್ತಂಭವೇ ಬಾಗುತ್ತಿರುವುದು ವಿಷಾದನೀಯ. ಹಾಗಾಗಿ ಪತ್ರಿಕಾ ಮಾಧ್ಯಮ ಜಾಗೃತವಾಗಬೇಕು.


ಪತ್ರಿಕೆಗಳಿಗೂ ವಿದ್ಯಾರ್ಥಿಗಳಿಗೂ ನಿಕಟ ಸಂಬಂಧವಿದ್ದು, ಭಾಷೆ ಮತ್ತು ಜ್ಞಾನದ ಜೊತೆಗೆ ಸಾಮಾಜಿಕ, ವೈಜ್ಞಾನಿಕ ಹಾಗೂ ವೈಚಾರಿಕತೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಪತ್ರಿಕೆಗಳಿಂದ ಆಗುತ್ತಿದೆ ಎಂದು ನಕ್ರೆ  ಹೇಳಿದರು.


ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಹಸಂಸ್ಥಾಪಕ ಗಣಪತಿ ಕೆ.ಎಸ್. ಮಾತನಾಡಿ, ಪತ್ರಕರ್ತರು ಸಮಾಜ ಮತ್ತು ಸರಕಾರದ ಮಧ್ಯೆ ಬೆಸುಗೆ ಮೂಡಿಸುತ್ತಾರೆ ಎಂದರು.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಮಾತನಾಡಿ ಬದುಕಿನ ಅರಿವು, ಜ್ಞಾನವೃದ್ದಿ ಜಾಗೃತಿಗಾಗಿ ಪತ್ರಿಕೆ ಓದುವುದು ಅವಶ್ಯ. ಓದುವ ಅಭಿರುಚಿ ಹೆಚ್ಚಲಿ ಎಂದು ಹಾರೈಸಿದರು.


ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಮಾತನಾಡಿ, ನವಮಾಧ್ಯಮದ ಈ ಕಾಲಘಟ್ಟದಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ಹೆಚ್ಚುತ್ತಿದೆ. ಬರವಣಿಗೆ ಮಾತ್ರ ಮಾನ್ಯತೆ ಪಡೆಯುತ್ತವೆ. ನಮ್ಮಲ್ಲಿ ಕಲ್ಪನಾ ಶಕ್ತಿ ಹೆಚ್ಚಬೇಕಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಮಾತನಾಡಿ, ಯಾವುದೇ ರಂಗದಲ್ಲಿದ್ದರೂ ನಿಷ್ಠೆ ಮುಖ್ಯ. ಪತ್ರಕರ್ತರು ಸವಾಲುಗಳನ್ನು ಎದುರಿಸಿ ಸಮಾಜದ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.


ಪ್ರಜಾವಾಣಿ ವರದಿಗಾರ ವಾಸುದೇವ ಭಟ್  ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಹಸಂಸ್ಥಾಪಕ ಅಶ್ವತ್ಥ್ ಎಸ್.ಎಲ್. ಅವರನ್ನು ಗೌರವಿಸಲಾಯಿತು. ಅವರ ಪರವಾಗಿ ಸಹಸಂಸ್ಥಾಪಕ ಗಣಪತಿ ಕೆ.ಎಸ್. ಸ್ವೀಕರಿಸಿದರು.


ಸಂಘದ ಪ್ರಧಾನ ಕಾರ್ಯದರ್ಶಿ 
ಹರೀಶ್ ಸಚ್ಚರಿಪೇಟೆ, ಕೋಶಾಧಿಕಾರಿ ಸತೀಶ್ ಶೆಟ್ಟಿ ವಾಮನಪದವು ವೇದಿಕೆಯಲ್ಲಿದ್ದರು.
ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಾದ ಪ್ರಜ್ಞಾ ರಾವ್ ಎಂ., ಶಿಥಿಲ್ ಎಸ್. ಶೆಟ್ಟಿ, ಸಮೀಕ್ಷಾ, ಐಫುನ್ ಮರಿಯಂ ಫಾತಿಮ ಮತ್ತು ತನಿಷ್ ಕುಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಜಿಲ್ಲಾ ಸಮಿತಿ ಉಪಾಧ್ಯಕ್ಷ  ಉದಯಕುಮಾರ್ ಮುಂಡ್ಕೂರು ಸ್ವಾಗತಿಸಿದರು. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹರೀಶ್ ಆಚಾರ್ಯ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಚೈತ್ರಾ ಕಬ್ಬಿನಾಲೆ ನಿರೂಪಿಸಿ, ಅವಿನ್ ಶೆಟ್ಟಿ ವಂದಿಸಿದರು.