ಚಳುವಳಿ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಹುನ್ನಾರ

ಲೋಕಬಂಧು ನ್ಯೂಸ್ | ಉಡುಪಿ, ಜು.28
ಚಳುವಳಿಯ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದು, 'ಕಾಕ್ರೋಚ್' ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆರೋಪಿಸಿದರು.
'ಕಾಕ್ರೋಚ್' ಹಾಗೂ ಕಾಂಗ್ರೆಸ್ ಬೆಂಬಲಿತರು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದು, ಗೂಂಡಾ ಸಂಸ್ಕೃತಿ ಮತ್ತು ದೇಶ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.


ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಧರ್ಮದ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ದೇಶವನ್ನು ಅವಮಾನಿಸುವ ಪ್ರಯತ್ನ ನಡೆಯುತ್ತಿದೆ ಎಂದರು.


ಸರ್ಕಾರ ಸಮರ್ಥಿಸಿಲ್ಲ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಯಾವುದೇ ಸರ್ಕಾರ ಸಮರ್ಥಸಿಲ್ಲ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಮರುಪರೀಕ್ಷೆ ನಡೆಸಲಾಗಿತ್ತು. ಆದರೆ, ಇಂಥ ಘಟನೆಗಳನ್ನು ನೆಪವಾಗಿಸಿಕೊಂಡು ದೇಶದ ವಿರುದ್ಧದ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.


ಜಾಗೃತಿ ಮೂಡಿಸಬೇಕು
ಪ್ರಧಾನಿ ಮೋದಿ ಅಧಿಕಾರಾವಧಿಯಲ್ಲಿ ಭಾರತ ದೇಶದ ಪ್ರತಿಷ್ಠೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿದೆ. ಆದರೆ, ದೇಶವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೆಲವು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಕಾಂಗ್ರೆಸ್‌ಗೆ ಚುನಾವಣಾ ವ್ಯವಸ್ಥೆ, ಸಂಸತ್ತು ಹಾಗೂ ಕಾನೂನಿನ ಮೇಲೆ ನಂಬಿಕೆ ಇಲ್ಲ. ಸಮಾಜ ವಿರೋಧಿ ಹಾಗೂ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುವ ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.


ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾದಾಗ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿತ್ತು. ಸರ್ಜಿಕಲ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂದೂರ ಸಂದರ್ಭದಲ್ಲಿಯೂ ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ಪ್ರಶ್ನಿಸಲಾಗಿತ್ತು. ಅದೇ ರೀತಿಯ ಮನೋಭಾವದವರು ಈಗ 'ಕಾಕ್ರೋಚ್' ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಆರೋಪಿಸಿದರು.


ಅಶಾಂತಿ ನಿರ್ಮಾಣದ ಉದ್ದೇಶ
ಚಳವಳಿಯ ಹೆಸರಿನಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಹಾಗೂ ಪೊಲೀಸರ ಮೇಲೆ ದಾಳಿ ನಡೆಸುವುದನ್ನು ಭಾರತೀಯ ಸಮಾಜ ಒಪ್ಪುವುದಿಲ್ಲ. ಜಂತರ್ ಮಂತರ್'ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಭಾಷೆ ಬಳಸಲಾಗಿದೆ ಎಂದು ಆರೋಪಿಸಿದ ಅವರು, ಇಂಥ ಪ್ರತಿಭಟನೆಗಳ ಉದ್ದೇಶವೇ ದೇಶದಲ್ಲಿ ಅಶಾಂತಿ ಸೃಷ್ಟಿಸುವುದಾಗಿದೆ ಎಂದರು.


ರಾಷ್ಟ್ರ ವಿರೋಧಿಗಳಿಂದ ಹೋರಾಟ
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ರಾಹುಲ್ ಗಾಂಧಿ ಡ್ರಗ್ ವ್ಯಸನಿ. ನಶೆಯಲ್ಲಿ ತೇಲಾಡುವ ರಾಹುಲ್ ಗಾಂಧಿ ವಿದ್ಯಾರ್ಥಿಗಳ ತಲೆಗೆ ವಿಷಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್, ಕಾಕ್ರೋಚ್, ಎಸ್.ಡಿ.ಪಿ.ಐ ಸಹಿತ ರಾಷ್ಟ್ರ ವಿರೋಧಿ ಪಕ್ಷಗಳ ಬೆಂಬಲದಿಂದ ಈ ಹೋರಾಟ ನಡೆದಿದೆ. ಇದು ವಿದ್ಯಾರ್ಥಿಗಳ ಪರ ಕಾಳಜಿಯ ಹೋರಾಟವಲ್ಲ. ವಿದೇಶಿ ಫಂಡ್ ಬಳಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗಿದೆ ಎಂದರು.


100 ದಿನದಲ್ಲಿ ಬಣ್ಣ ಬಯಲು
ಜಂತರ್ ಮಂತರ್'ನಲ್ಲಿ ನಡೆದ ಪ್ರತಿಭಟನೆಯಲ್ಲಿ ಶೇ. 95ರಷ್ಟು ಮಂದಿ ವಿದ್ಯಾರ್ಥಿಗಳಲ್ಲ. ಟೆರರಿಸ್ಟ್ ಸಂಘಟನೆಯಿಂದ ಬಂದಿದ್ದು, ಮುಂದಿನ 100 ದಿನಗಳೊಳಗೆ ಈ ದ್ರೋಹಿಗಳ ಬಣ್ಣ ಬಯಲಾಗಲಿದೆ. ಪ್ರಧಾನಿ ಮೋದಿ ವಿದ್ಯಾರ್ಥಿಗಳು ಯಾರು, ದೇಶ ದ್ರೋಹಿಗಳು ಯಾರು ಎನ್ನುವುದನ್ನು ಸಾಕ್ಷಿ ಸಮೇತ ಜನರ ಮುಂದಿಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ನಶೆಯಲ್ಲಿರುವ ರಾಹುಲ್'ಗೆ ದೇಶದ ಆಗುಹೋಗುಗಳ ಬಗ್ಗೆ ಚಿಂತೆ ಇಲ್ಲ. ಹಿಂದೂಗಳ ಭಾವನೆ ಕೆರಳಿಸಿ, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ರೀತಿಯಲ್ಲಿ ಹಿಂದೂಗಳ ಭಾವನೆಯನ್ನು ಕೆರಳಿಸುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಂಶವನ್ನು ಕಿತ್ತುಹಾಕುತ್ತೇವೆ ಎಂದು ಘರ್ಜಿಸಿದರು.


ಪ್ರಚೋದಿಸಿ ಪ್ರತಿಭಟನೆ
ವಿದ್ಯಾಕಾಶಿ ಎಂದೇ ಪ್ರಸಿದ್ಧವಾಗಿರುವ ಮಣಿಪಾಲದಲ್ಲಿ ಕೇರಳ, ತಮಿಳುನಾಡು ಸಹಿತ 7 ಮಂದಿ ಫ್ಯಾಕಲ್ಟಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಪ್ರತಿಭಟನೆ ಆಯೋಜಿಸಿದ್ದಾರೆ. ಈ 7 ಮಂದಿ ಅಲ್ಲಿನ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾರೆ. ಅದನ್ನು ಪೊಲೀಸರು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಬೇಕು. ತಪ್ಪಿದ್ದಲ್ಲಿ ನಾವು ಏನು ಎನ್ನುವುದನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದರು.


ಮೋದಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ
ವರ್ಷದ 10 ತಿಂಗಳು ವಿದೇಶಿ ಪ್ರವಾಸದಲ್ಲಿ ಮೋಜು ಮಸ್ತಿ ಮಾಡುವ ರಾಹುಲ್ ಗಾಂಧಿ ತಮಿಳುನಾಡಿನಲ್ಲಿ ತನ್ನ ಅಪ್ಪನನ್ನು ಕೊಂದ ಎಲ್.ಟಿ.ಟಿ ಪರ ಸಹಾನುಭೂತಿ ಹೊಂದಿದವರ ಜೊತೆ ಕೈಜೋಡಿಸಿದ್ದಾರೆ. ಅದರಿಂದ ಅವರ ಮನಸ್ಥಿತಿ ಗೊತ್ತಾಗುತ್ತದೆ. ಪ್ರಧಾನಿ ಸ್ಥಾನದ ಹಿರಿಮೆ ಮರೆತು ಅವರ ನಿವಾಸದ ಮುಂದೆ ಧರಣಿ ನಡೆಸಿರುವುದು ಖಂಡನೀಯ. ಪ್ರಧಾನಿ ಮೋದಿಗಾಗಿ ಜೀವ ಕೊಡಲೂ ನಾವು ಸಿದ್ಧರಿದ್ದೇವೆ ಎಂದು ಶಾಸಕ ಯಶಪಾಲ್ ಸುವರ್ಣ ಘೋಷಿಸಿದರು.


ನಟ ಪ್ರಕಾಶ್ ರಾಜ್ ಮೀನಿಗೆ ಆಹಾರವಾಗಬೇಕಾದೀತು!
ನಟ ಪ್ರಕಾಶ್ ರಾಜ್ ಕರಾವಳಿಯಲ್ಲಿ ಕಲಾವಿದರ ಮನಸ್ಸಿನಲ್ಲಿ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಅಧಿಕ ಪ್ರಸಂಗತನ ಮಾಡಿದರೆ ಅವರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕಾಗುತ್ತದೆ. ಅವರು ಮೀನುಗಳಿಗೆ ಆಹಾರವಾಗಬೇಕಾದೀತು ಎಂದು ಯಶಪಾಲ್ ಎಚ್ಚರಿಸಿದರು.


ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಮತ್ತು ಗುರುರಾಜ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ ನಾಯಕ್ ಅಲೆವೂರು, ದಿನಕರ ಬಾಬು, ಸುರೇಶ್ ನಾಯಕ್ ಕುಯಿಲಾಡಿ, ಲಾಲಾಜಿ ಆರ್. ಮೆಂಡನ್, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ಯಾಮಲಾ ಎಸ್. ಕುಂದರ್, ಗೀತಾಂಜಲಿ ಸುವರ್ಣ, ನಯನ ಗಣೇಶ್, ವೀಣಾ ಶೆಟ್ಟಿ ಮೊದಲಾದವರಿದ್ದರು.