ಬಿಜೆಪಿಯ ಜನ ವಿರೋಧಿ ನೀತಿಗೆ ಮೊದಲ ವಿಕೆಟ್ ಪತನ

ಲೋಕಬಂಧು ನ್ಯೂಸ್ ಉಡುಪಿ, ಜು.25
ಬಿಜೆಪಿ ಆಡಳಿತದ ಜನವಿರೋಧಿ ನೀತಿಗೆ ಮೊದಲ ವಿಕೆಟ್ ಪತನವಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾಂಗ್ರೆಸ್ ಲೋಕಸಭೆಯ ಒಳಗೂ ಹೊರಗೂ ಹೋರಾಟ ಮಾಡಿತ್ತು, ಅವರ ರಾಜೀನಾಮೆಯಿಂದ ಸಂತೋಷವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ ಹೇಳಿದರು.ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ವಿರುದ್ಧ ದೇಶದಾದ್ಯಂತ ಭಾರೀ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಭವನದ ಎದುರು ನಡೆದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.


ಕೇಂದ್ರ ಬಿಜೆಪಿ ಸರ್ಕಾರ ನೀಟ್ ಹಗರಣದ ಮೂಲಕ ದೇಶದ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡಿತ್ತು, ಪ್ರತಿಭಟನೆಗಿಳಿದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿತು. ಅಶ್ರುವಾಯು, ಲಾಠಿಚಾರ್ಜ್ ಮಾಡಿತು. ಈ ಮೂಲಕ ತಾನು ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ವಿರೋಧಿ ಸರಕಾರ ಎಂದು ತೋರಿಸಿತ್ತು. ಮೋದಿ ಸರಕಾರ ಇದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಸಾಬೀತು ಮಾಡಿತ್ತು ಎಂದು ಐವನ್ ಆರೋಪಿಸಿದರು.


ದೇಶದಲ್ಲಿ ಮಾತ್ರವಲ್ಲ, ಇಂಗ್ಲೆಂಡ್ ಮುಂತಾದ ವಿದೇಶಗಳಲ್ಲಿಯೂ ನೀಟ್ ಹಗರಣದ ವಿರುದ್ಧ ಪ್ರತಿಭಟನೆಗಳು ಆರಂಭವಾದಾಗ ಬಿಜೆಪಿ ಸರಕಾರ ಒತ್ತಡಕ್ಕೊಳಗಾಯಿತು. ಡದರಿಂದ ಪ್ರಧಾನಿಗೆ ರಾತ್ರಿ ನಿದ್ರೆಯೇ ಬಾರದಾಯಿತು‌. ರಾತ್ರಿ ಎದ್ದು ವೀಡಿಯೊ ಮಾಡುತ್ತಾರೆ, ಕನಸಿನಲ್ಲೂ ಸೆಲ್ಫಿ ವೀಡಿಯೊ ಮಾಡುತ್ತಾರೆ ಎಂದು ಟೀಕಿಸಿದ ಐವನ್, ಕೇವಲ ಪ್ರಚಾರದಿಂದಲೇ ಎಲ್ಲವನ್ನೂ ಗೆಲ್ಲುತ್ತೇನೆ ಎಂದು ಭ್ರಮೆಯಲ್ಲಿದ್ದ ಮೋದಿ ಸರ್ಕಾರ ನೀಟ್ ಹಗರಣದಿಂದ ಪ್ರಪಂಚದಾದ್ಯಂತ ಛೀ ಥೂ ಎನಿಸಿಕೊಂಡಿತು ಎಂದರು.


ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಸಂಭ್ರಮಿಸಿದರು.


ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕ ಹಿಮ್ಮತ್‌ ಸಿಂಗ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮತ್ತು ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.