ಲೋಕಬಂಧು ನ್ಯೂಸ್ | ಮಣಿಪಾಲ, ಜು.27
ಗೋಮಾತೆಗೆ ಗೌರವ ಅಭಿಯಾನ ಅಂಗವಾಗಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಸೋಮವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮನವಿ ಸ್ವೀಕರಿಸಿದರು.
ಭಾರತದಲ್ಲಿ ಗೋ ಹತ್ಯೆ ನಿಷೇಧ ಸಂಪೂರ್ಣವಾಗಿ ಜಾರಿಯಾಗಬೇಕು. ಹಸುವಿಗೆ ರಾಷ್ಟ್ರಮಾತೆ ಅಥವಾ ರಾಷ್ಟ್ರೀಯ ಪ್ರತಿಷ್ಠಾನದ ಗೌರವಾನ್ವಿತ ಸ್ಥಾನಮಾನ ನೀಡಬೇಕು. ಗೋ ಸೇವೆಗಾಗಿ ಕೇಂದ್ರೀಯ ಕಾನೂನು ಜಾರಿಗೆ ತರಬೇಕು ಮತ್ತು ಕೇಂದ್ರೀಯ ಸಚಿವಾಲಯ ಸ್ಥಾಪಿಸಬೇಕು. ಮೇವು ಭದ್ರತಾ ನೀತಿಯನ್ನು ಅಂತಿಮಗೊಳಿಸಬೇಕು. ಅದೇ ರೀತಿ ವೇದ ಲಕ್ಷಣ ಗೋ ವಂಶದ ಜಾನುವಾರುಗಳಿಂದ ಪಡೆದ ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆ ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಯಿತು.
ಗೋಮಾತೆಗೆ ಗೌರವ ಅಭಿಯಾನದ ತಾಲೂಕು ಸಂಚಾಲಕರಾದ ನಗರ ಸಭಾ ಮಾಜಿ ಸದಸ್ಯ ವಿಜಯ್ ಕೊಡವೂರು, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಬ್ರಹ್ಮಾವರ ತಾಲೂಕು ಪ್ರಮುಖರಾದ ರಾಘವೇಂದ್ರ ಪ್ರಭು ಕರ್ವಾಲು, ವೀಣಾ ಶೆಟ್ಟಿ, ರಮಿತಾ ಸೂರ್ಯವಂಶಿ ಮತ್ತು ಸಂತೋಷ್, ಎಬಿವಿಪಿ ಪ್ರಮುಖ ರಂಜಿತ್ ಮೊದಲಾದವರಿದ್ದರು.
