ಲೋಕಬಂಧು ನ್ಯೂಸ್ ಕಾಪು, ಜು.19
ಕುಂಜಾರುಗಿರಿ ಶ್ರೀ ದುರ್ಗೆಯ ಸನ್ನಿಧಾನದಲ್ಲಿ ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರವನ್ನು ಭಾನುವಾರ ಅನಾವರಣಗೊಳಿಸಿದರು.ಇದೇ ಸಂದರ್ಭದಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆ ನಿಮಿತ್ತ ಪ್ರತೀ ಭಾನುವಾರ ನಡೆಸಲು ಉದ್ದೇಶಿಸಿದ ಪರಿಸರ ಶುಚಿತ್ವ ಕಾರ್ಯಕ್ಕೆ ಶ್ರೀಪಾದರು ಚಾಲನೆ ನೀಡಿದರು.ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು ಮನೋನಿಯಾಮಕ ರುದ್ರದೇವರ ಸೇವೆ ಮಾಡುವುದರೊಂದಿಗೆ ಪರಿಸರ ಶುಚಿತ್ವದೊಂದಿಗೆ ಪರಿಸರ ರಕ್ಷಣೆ ಮಾಡಬೇಕು.ನಾವಿರುವ ಪರಿಸರ ಶುದ್ಧಿಯಾಗಿದ್ದರೆ ಮಾತ್ರ ನಮ್ಮ ಮನಸ್ಸು ಶುದ್ಧಿಯಿಂದ ಇರುತ್ತದೆ. ಅದರಿಂದ ದೇವ ಸೇವೆ ದೇಶ ಸೇವೆ ಮಾಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅದಮಾರು ಮಠದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜ್, ಮಠದ ಅಧಿಕಾರಿಗಳಾದ ನಾಗರಾಜ ರಾವ್ ಮತ್ತು ನಾಗರಾಜ ತಂತ್ರಿ, ಅರ್ಚಕ ಗೋಪಾಲಕೃಷ್ಣ ಭಟ್, ಇಂಜಿನಿಯರ್ ಲಕ್ಷ್ಮೀನಾರಾಯಣ ಉಪಾಧ್ಯಾಯ, ಕುರ್ಕಾಲು ಪಟ್ಟಚಾವಡಿ ದಿನೇಶ್ ಶೆಟ್ಟಿ, ಶ್ರೀ ಪರಶುರಾಮ ಭಜನಾ ಮಂಡಳಿ ಅಧ್ಯಕ್ಷ ಕುಳೇದು ಪ್ರಶಾಂತ ಶೆಟ್ಟಿ, ಪಾಜೈ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಆಚಾರ್ಯ, ಸುಮಾ ಶೆಟ್ಟಿ,ವಿಶ್ವ ಹಿಂದೂ ಪರಿಷತ್ತಿನ ಮುಖಂಡ ರಾಕೇಶ್ ಆಚಾರ್ಯ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುದರ್ಶನ್ ರಾವ್ ಮತ್ತು ವಿಶ್ವನಾಥ ಪೂಜಾರಿ ಮೊದಲಾದವರಿದ್ದರು.