ವಾಟರ್ ಸ್ಪೋರ್ಟ್ಸ್ ನಡೆಸಲು ಅನುಮತಿ ಕಡ್ಡಾಯ

ಲೋಕಬಂಧು ನ್ಯೂಸ್ ಉಡುಪಿ, ಜು.20
ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಟರ್ ಸ್ಪೋರ್ಟ್ಸ್ ನಡೆಸಲು ವಿವಿಧ ಇಲಾಖೆಗಳಿಂದ ಪರವಾನಿಗೆ ಪಡೆಯುವುದು ಅಗತ್ಯವಿದ್ದು, ಇನ್ನೂ ಪರವಾನಿಗೆ ಪಡೆಯದವರು ಶೀಘ್ರ ಪಡೆಯುವಂತೆ ಕರಾವಳಿ ಕಾವಲು ಪೊಲೀಸ್'ನ  ಪ್ರಭಾರ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಒಟ್ಟು 227 ವಾಟರ್ ಸ್ಪೋರ್ಟ್ಸ್ ಬೋಟ್ ಮಾಲಕರಿದ್ದು ಅವರಲ್ಲಿ 42 ಮಂದಿ ಪರವಾನಿಗೆ ಹೊಂದಿದ್ದರು. ಉಳಿದ 185 ಮಂದಿ ಮಾಲಕರು ಪರವಾನಿಗೆ ಪಡೆಯಲು ಬಾಕಿಯಿತ್ತು. ಆ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆಗಳಲ್ಲಿ ಬೋಟು ಮಾಲಕರು ಮತ್ತು ಚಾಲಕರ ಸಭೆ ನಡೆಸಿ ಸೂಕ್ತ ಸೂಚನೆ ನೀಡಲಾಗಿದೆ. ಸಭೆ ನಡೆಸಿದ ನಂತರ 227 ಬೋಟ್ ಮಾಲಕರಲ್ಲಿ 151 ಮಾಲಕರು ಪರವಾನಿಗೆ ಪಡೆದುಕೊಂಡಿದ್ದಾರೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


76 ಬೋಟ್ ಮಾಲಕರ ಪರವಾನಿಗೆ ನವೀಕರಣ ಬಾಕಿಯಿದೆ. ಅವರಿಗೆ ಪರವಾನಿಗೆ ನವೀಕರಣಕ್ಕೆ ಕಾಲಾವಕಾಶ ನೀಡಲಾಗಿದ್ದು, ಈವರೆಗೆ ನವೀಕರಣ ಮಾಡಿದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲಾ ಬೋಟ್ ಮಾಲಕರು ನಿಗದಿತ ಸಮಯದೊಳಗೆ ಪರವಾನಿಗೆ ಪಡೆದುಕೊಳ್ಳಲು ಸೂಚಿಸಲಾಗಿದೆ. ತಪ್ಪಿದಲ್ಲಿ ಮುಂದಕ್ಕೆ ಆಗುವ ಯಾವುದೇ ಅನಾಹುತಗಳಿಗೆ ಸಂಬಂಧಪಟ್ಟ ಬೋಟ್ ಮಾಲಕರನ್ನು ಹೊಣೆಗಾರರನ್ನಾಗಿ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.


ಕಳೆದ ಜ.26ರಂದು ಕೋಡಿಬೆಂಗ್ರೆ ಡೆಲ್ಟಾ ಬೀಚ್'ನಿಂದ ಸಮುದ್ರ ವಿಹಾರಕ್ಕಾಗಿ ಸುಮಾರು 28 ಮಂದಿ ಸುಹಾಸ್ ಮತ್ತು ಸೂಫಿಯಾನ ಎಂಬವರ ಮಾಲಕತ್ವದ ಬೋಟ್'ಗಳಲ್ಲಿ ಪಡುಕೆರೆಗೆ ತೆರಳಿ ವಾಪಸ್ ಬರುವಾಗ ಡೆಲ್ಟಾ ಬೀಚ್ ಕ್ರಾಸ್ ಬಳಿ ಸಮುದ್ರದಲ್ಲಿ ಬೋಟ್ ಮಗುಚಿ ಸಿಂಧೂ ಹಾಗೂ ಶಂಕರಪ್ಪ ಎಂಬವರು ಮೃತಪಟ್ಟಿದ್ದರು. ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಎಸ್ಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.