ಯಕ್ಷಗಾನ ಕಲಾವಿದ ಮುಂಡ್ಕೂರು ಕೃಷ್ಣ ಶೆಟ್ಟಿ ನಿಧನ

ಲೋಕಬಂಧು ನ್ಯೂಸ್ | ಬೆಳ್ಮಣ್ಣು, ಜು.28
ಯಕ್ಷಗಾನ ವಲಯದಲ್ಲಿ 'ಕುಟ್ಟಿ' ಎಂದೇ ಪ್ರಸಿದ್ಧರಾಗಿದ್ದ ಮುಂಡ್ಕೂರು ಕೃಷ್ಣ ಶೆಟ್ಟಿ (80) ಮಂಗಳವಾರ ನಿಧನರಾದರು.
ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


ತೆಂಕುತಿಟ್ಟಿನ ಅಗ್ರಮಾನ್ಯ ಪುಂಡು ವೇಷಧಾರಿಯಾಗಿದ್ದ ಅವರು ಕ್ರಿಶ್ಚಿಯನ್ ಬಾಬು ಅವರ ನಾಟ್ಯದಿಂದ ಪ್ರಭಾವಿತರಾಗಿ ಅವರಲ್ಲಿಯೇ ಆರಂಭದ ಯಕ್ಷ ಶಿಕ್ಷಣ ಪಡೆದರು. ಉದ್ಯೋಗ ನಿಮಿತ್ತ ಕೆಲವು ವರ್ಷ ಮುಂಬೈಯಲ್ಲಿದ್ದಾಗ ಗುರು ನಾರಾಯಣ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿದ್ದರು.


ಊರಿಗೆ ಬಂದು 26 ವರ್ಷ ಕಾಲ ಕಟೀಲು ಮೇಳದಲ್ಲಿ ಹಾಗೂ ಕೊಲ್ಲೂರು, ಬಪ್ಪನಾಡು, ಮಧೂರು ಮತ್ತು ತಲಕಳ ಹಾಗೂ ಬಡಗುತಿಟ್ಟಿನ ಸಾಲಿಗ್ರಾಮ ಮತ್ತು ಮಾರಣಕಟ್ಟೆ ಮೇಳ ಸೇರಿದಂತೆ ಸುಮಾರು ನಾಲ್ಕೂವರೆ ದಶಕಗಳ ಕಾಲ ತಿರುಗಾಟ ಮಾಡಿದ್ದರು.


ಇರಾ ಗೋಪಾಲಕೃಷ್ಣ ಭಾಗವತರು, ನಿಡ್ಲೆ ನರಸಿಂಹ ಭಟ್ಟರಂಥ ಮಹಾನ್ ಕಲಾವಿದರ ಹಿಮ್ಮೇಳದಲ್ಲಿ ಅಭಿಮನ್ಯು, ಬಬ್ರುವಾಹನ, ಮಾರ್ತಾಂಡತೇಜ, ಅಶ್ವತ್ಥಾಮ ಮೊದಲಾದ ಪಾತ್ರಗಳಲ್ಲಿ ಕಲಾ ಪ್ರೌಢಿಮೆ ಮೆರೆದಿದ್ದರು.


ಅವರಿಗೆ 2022ರಲ್ಲಿ ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.


ಕೃಷ್ಣ ಶಟ್ಟಿ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.