ಅಕ್ಕಕೆಫೆ ಮಹಿಳಾ ಆರ್ಥಿಕ ಸ್ವಾವಲಂಬನೆಯ ಪ್ರತೀಕ

ಲೋಕಬಂಧು ನ್ಯೂಸ್ | ಉಡುಪಿ, ಆ.16
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ಮತ್ತು ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯ ಕಲ್ಪಿಸಿ ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿ ರೂಪಿಸುವ ಉದ್ದೇಶದಿಂದ ಆರಂಭಿಸಲಾದ  ಅಕ್ಕ ಕೆಫೆಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ನಗರದ ನಾಯರ್'ಕೆರೆಯಲ್ಲಿ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಕ್ಕಕೆಫೆ ಮಹಿಳಾ ಆರ್ಥಿಕ ಸಬಲೀಕರಣದ ಮಹತ್ತರ ಯೋಜನೆಯಾಗಿದ್ದು, ಅದನ್ನು ಸಂಪೂರ್ಣವಾಗಿ ಮಹಿಳೆಯರೇ ಮುನ್ನಡೆಸುತ್ತಿರುವುದು ಹೆಮ್ಮೆಯ ವಿಷಯ. ಮಹಿಳೆಯರು ಇಂದು ಉದ್ಯಮಿಗಳಾಗುವ ಮೂಲಕ ಆರ್ಥಿಕ ಸ್ವಾತಂತ್ರ್ಯಕ್ಕೆ ಹೊಸ ಆಯಾಮ ನೀಡುತ್ತಿದ್ದಾರೆ. ಇದು ಮಹಿಳೆಯರ ಸ್ವಾಭಿಮಾನದ ಸಂಕೇತ ಎಂದರು.


ನೂತನ 'ಅಕ್ಕ ಕೆಫೆ'ಯನ್ನು ಮಣಿಪುರ ಗ್ರಾ. ಪಂ.ನ ಉಜ್ವಲ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಮುನ್ನಡೆಸುತ್ತಿದ್ದಾರೆ. ಈ ಕೆಫೆಗಳಲ್ಲಿ ಆರೋಗ್ಯಕರ ಹಾಗೂ ಸಾಂಪ್ರದಾಯಿಕ ಕರಾವಳಿ ಶೈಲಿಯ ಅಪ್ಪಟ ರುಚಿಕರ ಆಹಾರ ಪದಾರ್ಥ ಮತ್ತು ಲಘು ಉಪಹಾರಗಳು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯ ಇರಲಿವೆ.


ಕೇವಲ ಊಟೋಪಹಾರದ ತಾಣವಷ್ಟೇ ಅಲ್ಲದೆ, ಇದು ತಳಮಟ್ಟದ ಮಹಿಳೆಯರ ಅಡುಗೆ ಕೌಶಲ್ಯವನ್ನು ಸಮಾಜಕ್ಕೆ ಪರಿಚಯಿಸುವ ಮತ್ತು ಸ್ಥಳೀಯವಾಗಿ ತಯಾರಿಸಿದ ಪದಾರ್ಥಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಮೂಲಕ ಅವರ ಬದುಕಿಗೆ ಭದ್ರ ಬುನಾದಿ ಕಲ್ಪಿಸುವ ವಿಶಿಷ್ಟ ವೇದಿಕೆಯಾಗಿದೆ ಎಂದರು.


ಈ ಸಂದರ್ಭದಲ್ಲಿ ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ‌ ಗಫೂರ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್,‌ ಜಿ.ಪಂ. ಯೋಜನಾ ನಿರ್ದೇಶಕ ಉದಯ್ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯ, ಸಂಜೀವಿನಿ ಸ್ವಸಹಾಯ ಗುಂಪಿನ ಪ್ರತಿನಿಧಿಗಳು ಮೊದಲಾದವರಿದ್ದರು.