ಲೋಕಬಂಧು ನ್ಯೂಸ್ ನವದೆಹಲಿ, ಆ.14
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಸಾರ್ವಜನಿಕ ಸಭೆಯ ಬಳಿಕ ರಾಮಲೀಲಾ ಮೈದಾನದಲ್ಲಿ ಹವನ ನಡೆಸಿ ಸ್ಥಳವನ್ನು ‘ಶುದ್ಧೀಕರಿಸಲಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.ಈ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಇಂಥ ಆಚರಣೆಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಲ್ಲವೇ ಎಂದು ಪ್ರಶ್ನಿಸಿದರು.
ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಅಲ್ಲಿ ಹವನ ನಡೆಸಲಾಗಿದೆ. ನನ್ನ ಭಾಷಣದಲ್ಲಿ ಯಾವುದೇ ಸಮುದಾಯ ಅಥವಾ ಧರ್ಮದ ಹೆಸರನ್ನು ಪ್ರಸ್ತಾಪಿಸದೆ ಸರ್ಕಾರದ ವಿಚಾರಗಳನ್ನಷ್ಟೇ ಮಾತನಾಡಿದ್ದೆ. ಆದರೆ, ನನ್ನ ಭಾಷಣದ ನಂತರ ಅಲ್ಲಿ ಹವನ ನಡೆಸಿ ವೇದಿಕೆಯನ್ನು ಶುದ್ಧೀಕರಿಸಲಾಯಿತು ಎಂದು ಖರ್ಗೆ ಆರೋಪಿಸಿದರು.
ಇಂಥ ಘಟನೆ ಪ್ರಜಾಪ್ರಭುತ್ವದಲ್ಲಿ ನಡೆಯಬೇಕೇ? ಸಂವಿಧಾನವನ್ನು ಹೇಗೆ ರಕ್ಷಿಸಲಾಗುತ್ತಿದೆ? ಎಂಬ ಪ್ರಶ್ನೆಯನ್ನೂ ಅವರು ಸದನದಲ್ಲಿ ಮುಂದಿಟ್ಟರು.