ಲೋಕಬಂಧು ನ್ಯೂಸ್ | ಉಜಿರೆ, ಆ.31
ಮನುಷ್ಯನ ಪಂಚೇಂದ್ರಿಯಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಸಾವಿರಾರು ವರ್ಷಗಳಿಂದ ಬಳಸುತ್ತಿರುವ ಪಾರಂಪರಿಕ ಆಯುರ್ವೇದ ಪದ್ಧತಿ ಮೂಲಕ ಪಂಚೇಂದ್ರಿಯಗಳ ಬಲವರ್ಧನೆಯೊಂದಿಗೆ ಆರೋಗ್ಯ ಭಾಗ್ಯ ಹೊಂದಬಹುದು ಎಂದು ಕೇಂದ್ರ ಸರ್ಕಾರದ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಪರಿಷತ್‌ನ ಅಧ್ಯಕ್ಷೆ ವೈದ್ಯೆ ಮನೀಷಾ ಕೋಟೆಕಾರ್ ಹೇಳಿದರು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಆಪ್ತಾಸ್ ಆಯುರ್ವೇದ ಟ್ರಸ್ಟ್‌ನ ದಶಮಾನೋತ್ಸವ ಅಂಗವಾಗಿ ಇಂದ್ರಿಯ ಆರೋಗ್ಯದ ಬಗ್ಗೆ ಆಯೋಜಿಸಿದ ಅಂತಾರಾಷ್ಟ್ರೀಯ ಸಮಾವೇಶ ಪುನರ್ವಸು ಉದ್ಘಾ ಟಿಸಿ ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪ್ರಕೃತಿ- ಪರಿಸರಕ್ಕೂ ನಮ್ಮ ಬದುಕಿಗೂ ಅವಿನಾಭಾವ ಸಂಬಂಧವಿದ್ದು ಅಭಿವೃದ್ಧಿಯ ನೆಪದಲ್ಲಿ ನಾವು ಪ್ರಕೃತಿಯಿಂದ ವಿಮುಖರಾಗಿ ಪರಿಸರಕ್ಕೆ ಹಾನಿ ಮಾಡುತ್ತಿರುವುದು ಇಂದು ಅನೇಕ ರೋಗಗಳು ಪಸರಿಸಲು ಕಾರಣವಾಗಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ವೈದ್ಯರು ನಿರಂತರ ಕಲಿಕೆ, ಅಧ್ಯಯನ, ಸಂಶೋಧನೆಯೊಂದಿಗೆ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಂಡು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಕೌಶಲ, ಉತ್ತಮ ಸಂವಹನ, ಅನುಕಂಪ ಮತ್ತು ಸಹಾನುಭೂತಿಯೊಂದಿಗೆ ನೈತಿಕತೆಯಿಂದ ರೋಗಿಗಳ ಸೇವೆ ಮಾಡಬೇಕು ಎಂದವರು ಸಲಹೆ ನೀಡಿದರು.
ಇಂದ್ರಿಯ ಆರೋಗ್ಯ ಅಭಿಯಾನದ ಲೋಗೊ ಅನಾವರಣಗೊಳಿಸಿ'ಚೋಟಾ ಚರಕ' ಪುಸ್ತಕ ಅನಾವರಣಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ದೈನಂದಿನ ಜೀವನದಲ್ಲಿ ಆಯುರ್ವೇದ ಪದ್ಧತಿಯ ಬಳಕೆಯಿಂದ ಆಯುಷ್ಯ ವೃದ್ಧಿಯೊಂದಿಗೆ ಸುಖ- ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಗಳ ಮೂಲಕ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಶುಶ್ರೂಷೆ ನೀಡಿ ಆಯುರ್ವೇದ ಪದ್ಧತಿಯನ್ನು ಜನಪ್ರಿಯಗೊಳಿಸಲಾಗುತ್ತಿದೆ.
ಪಂಚೇಂದ್ರಿಗಳ ನಿಯಂತ್ರಣದಿಂದ ಆರೋಗ್ಯ ಭಾಗ್ಯ ಹೊಂದಬಹುದು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ವೈದ್ಯ ಡಾ. ಶರದ್‌ಕುಮಾರ್ ಎಂ. ಇಂದ್ರಿಯ ಆರೋಗ್ಯ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ದೇಶದಲ್ಲಿರುವ 600 ಆಯುರ್ವೇದ ಕಾಲೇಜುಗಳ ಆಶ್ರಯದಲ್ಲಿ ಮುಂದಿನ 5 ವರ್ಷಗಳಲ್ಲಿ ಪ್ರತಿವರ್ಷ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ 500 ಮಂದಿ ಸ್ವಯಂಸೇವಕರು ಆಯುರ್ವೇದ ಪದ್ಧತಿ ಬಗ್ಗೆ ಅರಿವು, ಜಾಗೃತಿ ಮೂಡಿಸಲಿದ್ದಾರೆ.
ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಇಂದು ಧರ್ಮಸ್ಥಳದಿಂದಲೇ ಈ ವಿನೂತನ ಕಾರ್ಯಕ್ರಮ ಶುಭಾರಂಭಗೊಳ್ಳುತ್ತದೆ ಎಂದು ಪ್ರಕಟಿಸಿದರು.
ಶುಭಾಶಂಸನೆಗೈದ ಆಯುಷ್ ಸಲಹೆಗಾರ ಡಾ.ಕೌಸ್ತುಭ ಉಪಾಧ್ಯಾಯ, ಗ್ರಾಮೀಣ ಪ್ರದೇಶಗಳಲ್ಲಿ ಆಯುರ್ವೇದ ಶಿಬಿರಗಳನ್ನು ಆಯೋಜಿಸಿ ಜನಸಾಮಾನ್ಯರಿಗೆ ಮಾಹಿತಿ, ಮಾರ್ಗದರ್ಶನ ನೀಡಬೇಕು. ಸೇವೆಯ ಬಗ್ಗೆ ದಾಖಲೀಕರಣ ಮಾಡಬೇಕು ಎಂದರು.
ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಆಯುಕ್ತ ಡಾ.ಸುನಿಲ್ ಪನ್ವಾರ್ ಮಾತನಾಡಿ, ಆಯುರ್ವೇದ ವೈದ್ಯರು ಪಾರಂಪರಿಕ ಪದ್ಧತಿಯ ರಾಯಭಾರಿಗಳಾಗಿ ಎಲ್ಲಾ ಕಡೆ ಈ ಪದ್ಧತಿಯನ್ನು ಜನಪ್ರಿಯಗೊಳಿಸಬೇಕು. ಸಾರ್ವಜನಿಕರಿಂದಲೂ ಈ ಪದ್ಧತಿಗೆ ಉತ್ತಮ ಸ್ಪಂದನೆ ದೊರಕುತ್ತಿದ್ದು, ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ನಡೆಸಬೇಕು ಎಂದರು.
'ಗುರುವಂದನ' ಕಾರ್ಯಕ್ರಮದಡಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಲಾಯಿತು. ಬೆಂಗಳೂರಿನ ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.
ಎಸ್.ಡಿ.ಎಂ. ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಡಾ.ಪ್ರಸನ್ನ ಎನ್.ರಾವ್ ಸ್ವಾಗತಿಸಿ, ಡಾ.ಕಿರಣ್ ಕೆ. ವಂದಿಸಿದರು. ಡಾ.ಅನುಪಮ ವಿ.ಚಿನ್ನಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭಕ್ಕೆ ಪೂರ್ವಭಾವಿಯಾಗಿ, 'ಸಂಹಿತಾ' ಮೆರವಣಿಗೆ, ಪ್ರತಿಷ್ಠಾಪನೆ, ವಾದ್ಯಮೇಳ, ಶಂಖನಾದ, ಸಂಹಿತಾ ಪ್ರತಿಷ್ಠಾಪನೆ ಮೊದಲಾದ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು.