ಕಸ ವಿಲೇವಾರಿಗೆ ಸಿವಿಕ್ ವಾಚ್ಅಪ್ ಆ್ಯಪ್ ಅನುಷ್ಠಾನ

ಲೋಕಬಂಧು ನ್ಯೂಸ್ | ಉಡುಪಿ, ಆ.15
ಉಡುಪಿ ಜಿಲ್ಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಉದ್ದೇಶಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ ವಿಲೇವಾರಿಗೆ ಉಡುಪಿ ಸಿವಿಕ್ ವಾಚ್ಅಪ್ ಆ್ಯಪ್ ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಜಿಲ್ಲಾ ಉಸ್ತುವರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣಗೈದು, ಗೌರವ ರಕ್ಷೆ ಸ್ವೀಕರಿಸಿ ಪಥಸಂಚಲನ ವೀಕ್ಷಿಸಿ ಸ್ವಾತಂತ್ರ್ಯ ಸಂದೇಶ ನೀಡಿದರು.


ಸಾಲಿಗ್ರಾಮ ಪಟ್ಟಣ ಪಂಚಾಯತ್'ನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದರು.


ಮಾದಕ ವ್ಯಸನ ಯುವಕರ ಸಾಮರ್ಥ್ಯ, ಆರ್ಥಿಕತೆ ಮತ್ತು ಸಮಾಜವನ್ನು ನಾಶ ಮಾಡುತ್ತದೆ. ರಾಜ್ಯವನ್ನು ಮಾದಕ ವ್ಯಸನ ಮುಕ್ತವನ್ನಾಗಿಸುವುದು ನಮ್ಮ ಗುರಿ. ವ್ಯಸನ ಮುಕ್ತ ಸಮಾಜಕ್ಕಾಗಿ ಜಿಲ್ಲೆಯ ಪೊಲೀಸ್ ಇಲಾಖೆಯ ಕ್ಯೂಆರ್ ಕೋಡ್'ಗೆ ನಾಗರಿಕರು ಸ್ವಯಂಪ್ರೇರಿತರಾಗಿ ಮಾಹಿತಿ ನೀಡಿ ಕೈಜೋಡಿಸಬೇಕು ಎಂದರು.


ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಪ್ರತಿನಿತ್ಯ ಬಳಕೆಯಾದ ಹೂವುಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪಿಸಲು ವಿ-ಕೇರ್ ಸೊಸೈಟಿ ಸಹಯೋಗದಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಿ, ಪರಿಸರ ಸ್ನೇಹಿ ಅಗರಬತ್ತಿ, ಬಿದಿರು ರಹಿತ ದೂಪದ ಕಡ್ಡಿ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನವನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.


ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಸ್ಥಳೀಯ ಕಲೆ, ಸಂಸ್ಕೃತಿ, ಪರಂಪರೆ, ಜೀವನ ಶೈಲಿ ಹಾಗೂ ವೈಶಿಷ್ಟ್ಯತೆಯ ನೈಜ ಸೊಗಡನ್ನು ಪ್ರತಿಬಿಂಬಿಸುವ ನೈಜ ಅಥವಾ ಕಾಲ್ಪನಿಕ ಮ್ಯಾಸ್ಕಾಟ್'ನ್ನು ವಿನ್ಯಾಸಗೊಳಿಸುವ ಸ್ಪರ್ಧೆ ನಡೆಸಿ 2,838 ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದರು.


ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಮೀನುಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ, ಗ್ರಾಮೀಣ ಮಹಿಳೆಯರಲ್ಲಿ ಉಳಿತಾಯದ ಮನೋಭಾವವನ್ನು ಬೆಳೆಸಿ, ಸುಲಭವಾಗಿ ಬ್ಯಾಂಕ್ ಸೌಲಭ್ಯ, ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಉಡುಪಿ ನಗರಕ್ಕೆ 24 ಗಂಟೆ ಕುಡಿಯುವ ನೀರು ಸರಬರಾಜಿಗೆ 238.63 ಕೋ. ರೂ.ವೆಚ್ಚದಲ್ಲಿ ವಾರಾಹಿ ನದಿಯ ಮೂಲಕ ಮಣಿಪಾಲದ ಜಿ.ಎಲ್.ಎಸ್.ಆರ್.ಗೆ ನಿರಂತರ ನೀರು ಸರಬರಾಜು ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು.


ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿ.ಪಂ. ಸಿಇಓ ಪ್ರತೀಕ್ ಬಾಯಲ್, ಎಸ್.ಪಿ. ಹರಿರಾಮ್ ಶಂಕರ್ ಮೊದಲಾದವರಿದ್ದರು.


ಪೊಲೀಸ್, ಎನ್.ಸಿ.ಸಿ, ಎನ್.ಎಸ್.ಎಸ್., ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಯುವ ಸಬಲೀಕರರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ನಿರೂಪಿಸಿದರು.