ಲೋಕಬಂಧು ನ್ಯೂಸ್ ನವದೆಹಲಿ, ಆ.14
ಜಗತ್ತಿನಲ್ಲಿ ಯುದ್ಧ, ಅಸ್ಥಿರತೆ ಹಾಗೂ ಅನಿಶ್ಚಿತತೆ ನೆಲೆಸಿರುವುದರ ನಡುವೆಯೂ ಭಾರತ ಜಾಗತಿಕ ಸರಾಸರಿ ಪ್ರಗತಿಗೆ ಸರಿಸಮವಾಗಿ 2 ಕ್ಕಿಂತ ಹೆಚ್ಚು ಬಾರಿ ಆರ್ಥಿಕ ಪ್ರಗತಿ ದಾಖಲಿಸಿದೆ ಎಂದು ಮುರ್ಮು ಹೇಳಿದರು.ಸ್ವಾತಂತ್ರ್ಯ ದಿನಾಚರಣೆಗೆ ಮುನ್ನಾ ದಿನವಾದ ಶುಕ್ರವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
ಭಯೋತ್ಪಾದನೆ ಬೆಂಬಲಿಸುವ ಹಾಗೂ ಭಯೋತ್ಪಾದಕರಿಗೆ ಆಶ್ರಯ ನೀಡುವ ನೆರೆಯ ಪಾಕಿಸ್ತಾನಕ್ಕೆ ಸಿಂಧು ನದಿ ನೀರು ನಿಲ್ಲಿಸಿದ್ದು ಭಾರತದ ನಿರ್ಣಾಯಕ ಕ್ರಮವಾಗಿದೆ. ದೇಶದ- ಅದರಲ್ಲೂ ರೈತರ ಹಿತದೃಷ್ಟಿಯಿಂದ ಈ ಕ್ರಮ ಸರಿಯಾಗಿಯೇ ಇದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಮರ್ಥಿಸಿದ್ದಾರೆ.
ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರು ಇಂತಹ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಅವರು ಎಲ್ಲಿ ಅಡಗಿದ್ದಾರೆಂಬುದು ಮುಖ್ಯವಲ್ಲ ಎಂದು ಚಾಟಿ ಬೀಸಿದರು. ಭಾರತೀಯ ಸಶಸ್ತ್ರ ಸೇನಾಪಡೆಗಳು ಭಯೋತ್ಪಾದಕ ಜಾಲವನ್ನು ಭೇದಿಸಲು ಸಮರ್ಥವಾಗಿವೆ ಎಂಬುದನ್ನು `ಆಪರೇಷನ್ ಸಿಂದೂರ’ ಎತ್ತಿತೋರಿಸಿದೆ ಎಂದು ಮುರ್ಮು ಬೊಟ್ಟು ಮಾಡಿದರು.
ನಕ್ಸಲ್ ಮುಕ್ತ ಸಾಧನೆ: ಭಾರತ ಈಗ ನಕ್ಸಲ್ ಮುಕ್ತ ದೇಶವಾಗಿದೆ. ಇದು ದೇಶದ ಪ್ರಮುಖ ಸಾಧನೆಯಾಗಿದೆ. ಎಡ ಪಂಥೀಯ ಉಗ್ರವಾದ ಮನೋಭಾವದಿಂದ ನಕ್ಸಲೀಯ ಚಟುವಟಿಕೆಗೆ ಕುಖ್ಯಾತವಾಗಿದ್ದ ಛತ್ತೀಸ್‌ಗಡದ ಬಸ್ತಾರ್ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಅಭಿವೃದ್ಧಿ ಕ್ರಮಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಮೂಲಕ ಇಡೀ ಪ್ರದೇಶವನ್ನು ಪರಿವರ್ತಿಸಲಾಗಿದೆ ಎಂದು ರಾಷ್ಟçಪತಿಗಳು ಉಲ್ಲೇಖಿಸಿದರು.
ನ್ಯಾಯ ಒದಗಿಸಬೇಕು: ಹಣವಿಲ್ಲವೆಂಬ ಕಾರಣಕ್ಕೆ ದೇಶದ ಯಾವೊಬ್ಬ ನಾಗರಿಕರೂ ನ್ಯಾಯ ಪಡೆಯುವಲ್ಲಿ ವಿಫಲರಾಗಬಾರದು. ನ್ಯಾಯಾಂಗವು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ರಾಷ್ಟ್ರಪತಿಗಳು ಸಂದೇಶ ನೀಡಿದರು. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ, ಬಡತನ ಪ್ರಮಾಣ ಕುಗ್ಗಿಸಿರುವುದು, ಆಹಾರ ಭದ್ರತೆ, ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದರು.