ಲೋಕಬಂಧು ನ್ಯೂಸ್ ಉಡುಪಿ, ಆ.30
ಕವಿ ಕಡೆಂಗೋಡ್ಲು ಶಂಕರ ಭಟ್ಟ ಅವರು ವಾಙ್ಮಯ ತಪಸ್ವಿಯಾಗಿದ್ದು, ಅವರ ಕಾವ್ಯ ವಾಙ್ಮಯ ತಪಸ್ಸಾಗಿದೆ ಎಂದು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರವಿರಾಜ ಶೆಟ್ಟಿ ಹೇಳಿದರು.ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜು ಆವರಣದ ಧ್ವನ್ಯಾಲೋಕ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಲಕ್ಷ್ಮಣ ವಿ.ಎ. ಅವರ 'ಗೋಡೆಗೆ ನೇತುಬಿದ್ದ ಭೂಪಟ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ, ಯುದ್ಧ ವಿರೋಧಿ ನೀತಿ ಈ ಕೃತಿಯ ಒಟ್ಟು ಆಶಯವಾಗಿದೆ. ಯುದ್ಧದ ಸಂದರ್ಭದಲ್ಲಿ ಅರ್ಥ ವ್ಯವಸ್ಥೆ, ಮಾರುಕಟ್ಟೆ ನೀತಿ ನಿರೂಪಕರು ನಮ್ಮ ಬದುಕಿನಲ್ಲಿ ಹೇಗೆ ಚೆಲ್ಲಾಟವಾಡುತ್ತಾರೆ ಎಂಬುದನ್ನು ಕೃತಿ ಬಿಂಬಿಸುತ್ತದೆ ಎಂದರು.
ಶಾಲೆ, ಆಸ್ಪತ್ರೆಗಳ ಮೇಲೆ ದಾಳಿ ನಡೆಸಬಾರದು ಎಂಬ ನಿಯಮಗಳಿದ್ದರೂ ಯುದ್ಧ ಆರಂಭವಾದರೆ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತದೆ. ಇದು ಮಹಾಭಾರತ ಕಾಲದಿಂದಲೂ ನಡೆದು ಬಂದಿದೆ ಎಂದವರು ಹೇಳಿದರು. ಲಕ್ಷ್ಮಣ ವಿ.ಎ. ಅವರ ಕೃತಿಯಲ್ಲಿನ ಕವಿತೆಗಳು ಭ್ರಮೆ ಮತ್ತು ವಾಸ್ತವದ ನಡುವೆ ಜೀಕಾಡುತ್ತವೆ. ಆದರೂ ವಾಸ್ತವವೇ ಕವಿತೆಗಳ ಜೀವಾಳವಾಗಿದೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಗಾಯತ್ರಿ ಜಿ. ಪೈ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಸಂಶೋಧಕ ಡಾ.ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು. ಚೈತನ್ಯಾ ಎನ್. ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಲಕ್ಷ್ಮಣ ವಿ.ಎ. ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
.jpg)