ಲೋಕಬಂಧು ನ್ಯೂಸ್ | ಉಡುಪಿ, ಆ.17
ಶ್ರಾವಣ ಶುದ್ಧ ಪಂಚಮಿ ಸೋಮವಾರ ಉಡುಪಿ, ದ.ಕ. ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಆದರೆ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶೇಷ ಸ್ಥಾನವಿದ್ದು, ಕಲ್ಲ ನಾಗನಿಗೆ ಹಾಲೆರೆವ ಮಂದಿ ದಿಟದ ನಾಗನ ಕಂಡರೆ ಕೊಲ್ಲುವರು ಎಂಬ ಮಾತು ಇಲ್ಲಿ ಸಲ್ಲುವುದಿಲ್ಲ. ಇಲ್ಲಿ ನಿಜ ನಾಗನ ಕಂಡರೂ ಭಕ್ತಿಯಿಂದ ಕೈಮುಗಿಯುತ್ತಾರೆ, ಸತ್ತ ನಾಗನಿಗೆ ಅಂತ್ಯೇಷ್ಟಿ ನಡೆಸುತ್ತಾರೆ. ಕಲ್ಲಿನ ನಾಗನಿಗೂ ಹಾಲೆರೆಯುತ್ತಾರೆ. ನಾಗ ಪ್ರತ್ಯಕ್ಷ ದೇವರು ಎಂಬುದು ತುಳುನಾಡಿನವರ ನಂಬಿಕೆ, ವಿಶ್ವಾಸ.
ನಾಗರ ಪಂಚಮಿ ಅಂಗವಾಗಿ ಭಕ್ತರು ತಮ್ಮ ಮೂಲ ನಾಗ ಸ್ಥಾನಗಳಿಗೆ ತೆರಳಿ ನಾಗತನು, ಕ್ಷೀರಾಭಿಷೇಕ ನಡೆಸಿದರು. ನಾಗ ತಂಬಿಲ, ಆಶ್ಲೇಷಾ ಬಲಿ ಇತ್ಯಾದಿ ನಾಗ ಸಂಬಂಧಿ ಪೂಜೆ ನೆರವೇರಿಸಲಾಯಿತು. ಸೋಮವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ನಾಗ ತಂಬಿಲ, ವಿಧಿ- ವಿಧಾನಗಳಿಗೆ ಅಗತ್ಯವಿರುವ ಅರಿಶಿನ ಎಲೆಗಳು, ಎಳನೀರು, ಹೂವುಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನಸಂದಣಿ ಹೆಚ್ಚಾಗಿತ್ತು.
ಈ ಬಾರಿ ಸಂಕ್ರಮಣ ಹಾಗೂ ಸೋಮವಾರದಂದು ನಾಗರ ಪಂಚಮಿ ಬಂದಿರುವುದು ವಿಶೇಷ ಎಂದು ಪರಿಗಣಿಸಲಾಗಿದೆ. ಜನರು ಎಳನೀರು, ಹೂವು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಯಲ್ಲಿ ಸೇರಿದ್ದರು. ಹಲವಾರು ವಸ್ತುಗಳ ಬೆಲೆ ಸ್ವಲ್ಪಮಟ್ಟಿಗೆ ಏರಿಕೆಯಾಗಿತ್ತು.
ನಾಗ ದೇವಾಲಯಗಳು ಮತ್ತು ನಾಗಬನಗಳಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಗಿದ್ದು, ಮುಂಜಾನೆಯಿಂದಲೇ ಹಾಲು ಮತ್ತು ಎಳನೀರು ಅಭಿಷೇಕ, ವಿಶೇಷ ಪೂಜೆ ನಡೆದವು.
ಪ್ರಸಿದ್ಧ ನಾಗಕ್ಷೇತ್ರಗಳಾದ ಘಾಟಿ ಸುಬ್ರಹ್ಮಣ್ಯ, ಕುಡುಪು, ಕಡಂದಲೆ, ಅರಿತೋಡು, ಮಾಂಗೋಡು, ಮುಚ್ಚಿಲಗೋಡು, ಕಂದಾವರ, ಸಾಂತೂರು, ಸಗ್ರಿ ಮೊದಲಾದೆಡೆಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ನಾಗ ಪ್ರೀತ್ಯರ್ಥವಾಗಿ ಅರಳು-ಬೆಲ್ಲ, ಹಾಲುಬಾಯಿ ಇತ್ಯಾದಿ ಸಮರ್ಪಿಸಿದ್ದಲ್ಲದೆ ಸೀಯಾಳ (ಎಳನೀರು), ಹಾಲು, ಪಂಚಾಮೃತ ಅಭಿಷೇಕ ನಡೆಸಲಾಯಿತು. ಕಟು ಸುವಾಸನೆಯುಳ್ಳ ಪುಷ್ಪಗಳಾದ ಕೇದಗೆ, ಸಂಪಿಗೆ, ನಾಗಲಿಂಗಪುಷ್ಪ ಇತ್ಯಾದಿ ಸಮರ್ಪಿಸಲಾಯಿತು.
ತಾಳಿಪಾಡಿ ಮಠ
ಕಿನ್ನಿಗೋಳಿ ಸಮೀಪದ ತಾಳಿಪಾಡಿ ಮಠ ಶ್ರೀ ಲಕ್ಷ್ಮೀವವೆಂಕಟರಮಣ ದೇವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜೆ ನಡೆಸಲಾಯಿತು.
ಮಂಜನಬೈಲು


