‘ಶುದ್ಧೀಕರಣ’ ಪ್ರಕರಣ: ಸಂವಿಧಾನದ ಮೌಲ್ಯಗಳ ಮೇಲಿನ ದಾಳಿ

ಲೋಕಬಂಧು ನ್ಯೂಸ್ ಬೆಂಗಳೂರು, ಆ.14
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಹಿರಂಗ ಸಭೆ ನಡೆದ ಸ್ಥಳ ‘ಶುದ್ಧೀಕರಣ’ ಮಾಡಿರುವ ಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಕೃತ್ಯ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಶಿವಕುಮಾರ್, ಈ ಘಟನೆ ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅಪಮಾನವಲ್ಲ, ಬದಲಿಗೆ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳ ಮೇಲಿನ ನೇರ ದಾಳಿ. ಅಲ್ಲದೆ, ಆಧುನಿಕ ಭಾರತದಲ್ಲಿ ಜಾತಿ ತಾರತಮ್ಯದ ಅಸಹ್ಯಕರ ನೆನಪು ಎಂದು ಕಿಡಿಕಾರಿದ್ದಾರೆ

ಖರ್ಗೆ ಅವರು ದೇಶದ ಗೌರವಾನ್ವಿತ ಜನನಾಯಕ. ದಲಿತ ನಾಯಕರೊಬ್ಬರು ಭಾಷಣ ಮಾಡಿದರು ಎಂಬ ಕಾರಣಕ್ಕೆ ಸಾರ್ವಜನಿಕ ಸ್ಥಳವೊಂದಕ್ಕೆ ಶುದ್ಧೀಕರಣ ಬೇಕು ಎಂದು ಬಿಂಬಿಸಿರುವುದು ಜಾತಿ ತಾರತಮ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು‌ ವ್ಯಾಖ್ಯಾನಿಸಿದರು.


ಅಸ್ಪೃಶ್ಯತೆಯು ಕೇವಲ ಅಭಿಪ್ರಾಯದ ವಿಷಯವಲ್ಲ, ಅದೊಂದು ಸಾಂವಿಧಾನಿಕ ಅಪರಾಧ ಮತ್ತು ನೈತಿಕ ಕಳಂಕ. ಇಂಥ ಆಚರಣೆಗಳನ್ನು ಸಮರ್ಥಿಸಲು ಯತ್ನಿಸುವವರು ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಗಣರಾಜ್ಯದ ತಡಿಪಾಯದ ಮೇಲಿನ ದಾಳಿ ಎಂದು ಕಿಡಿಕಾರಿದ್ದಾರೆ.