ಲೋಕಬಂಧು ನ್ಯೂಸ್ ಮೈಸೂರು, ಆ.31
ಸಾರ್ವಜನಿಕ ರಸ್ತೆಗಳ ಇಕ್ಕೆಲಗಳಲ್ಲಿರುವ ರೈತರ ಹಾಗೂ ಸರ್ಕಾರಿ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ತೇಗದ ಸಸಿ ನೆಟ್ಟು ರೈತರೇ ಪೋಷಿಸುವ 'ತೇಗದ ಸಿರಿ' ಯೋಜನೆ ಜಾರಿಗೆ ತರಲಾಗುವುದು. ಈ ಯೋಜನೆಯಡಿ ವರ್ಷಕ್ಕೆ 1 ಕೋಟಿ ತೇಗದ ಸಸಿ ನೆಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಪ್ರಕಟಿಸಿದರು.ಸುತ್ತೂರು ಶಾಖಾ ಮಠದಲ್ಲಿ ನಡೆದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 111ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ರಸ್ತೆಗಳ ಅಕ್ಕಪಕ್ಕದ ಪ್ರತಿಯೊಬ್ಬರ ಜಮೀನಿನಲ್ಲೂ ತೇಗದ ಸಸಿ ನೆಡಬೇಕು. ಅಲ್ಲದೇ, ಜಮೀನಿನ ಮಾಲೀಕರು ಆ ತೇಗದ ಸಸಿಯ ನಿರ್ವಹಣೆಯ ಹೊಣೆ ಹೊರಬೇಕು. ಅದರಿಂದ ಬರುವ ಲಾಭದಲ್ಲಿ ಶೇ. 70ರಷ್ಟು ರೈತರು ಅಥವಾ ಭೂ ಮಾಲೀಕರಿಗೆ ಮತ್ತು ಸರ್ಕಾರಕ್ಕೆ ಶೇ.30ರಷ್ಟು ಹಂಚಲಾಗುವ ವಿಶಿಷ್ಟ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಇದು ಸರ್ಕಾರ ಮತ್ತು ಭೂಮಾಲೀಕರ ಪರಸ್ಪರ ಸಹಕಾರದಿಂದ ರಾಜ್ಯದ ಅರಣ್ಯ ಸಂಪತ್ತು ಹೆಚ್ಚಿಸುವ ವಿಶಿಷ್ಟ ಯೋಜನೆ. ಮುಂದಿನ 25 ವರ್ಷಕ್ಕೆ ರಾಜ್ಯದಲ್ಲಿ ಹಸಿರು ಸಂಪತ್ತಾಗಿ ರೂಪುಗೊಳ್ಳುತ್ತದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ 5 ಕೋಟಿ ಸಸಿ ನೆಡುವ ಕಾರ್ಯಕ್ರಮ ರೂಪಿಸಿದ್ದರು. ಅದರಂತೆ ಈಗ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಅರಣ್ಯ ಇಲಾಖೆ, ಹಾಗೂ ಖಾಸಗಿ ನರ್ಸರಿಗಳಿಗೆ ತೇಗದ ಸಸಿ ಬೆಳೆಸುವಂತೆ ಹೇಳಲಾಗುವುದು. ಅರಣ್ಯ ಅಧಿಕಾರಿಗಳು ಈ ಆಲೋಚನೆಯಿಂದ ರಾಜ್ಯದಲ್ಲಿ ಹಸಿರು ಹೆಚ್ಚಲಿದೆ ಎಂದಿದ್ದಾರೆ ಎಂದರು.