ಲೋಕಬಂಧು ನ್ಯೂಸ್ | ಮಣಿಪಾಲ, ಆ.16
ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ಬೆಂಬಲಿತ ಉಡುಪಿ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ಇಲ್ಲು ಫುಡ್ಸ್ ಮಸಾಲಾಪುಡಿ ತಯಾರಿಕಾ ಘಟಕವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಹಾರ ಪದಾರ್ಥಗಳು ಗುಣಮಟ್ಟದಲ್ಲಿ ಚೆನ್ನಾಗಿದ್ದಾಗ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಸಾಮಾನ್ಯ. ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಇಲ್ಲು ಫುಡ್ಸ್ ಮಸಾಲಾ ಪುಡಿ ತಯಾರಿಕಾ ಘಟಕ ಮಸಾಲೆಪುಡಿಯ ಗುಣಮಟ್ಟವನ್ನು ಕಾಯ್ದುಕೊಂಡು ಮಾರುಕಟ್ಟೆಯ ವಿಸ್ತರಣೆಗೆ ಒತ್ತುನೀಡಬೇಕು ಎಂದು ಕಿವಿಮಾತು ಹೇಳಿದರು.
ಕಂಪನಿ ಕಾಯ್ದೆಯಡಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿರುವ ಈ ಸಂಸ್ಥೆ ಮಹಿಳಾ ನೇತೃತ್ವದ ಕೃಷಿ ಮತ್ತು ಗ್ರಾಮೀಣ ಉದ್ಯಮಗಳನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತ್'ಗಳ ಒಂದು ಸಾವಿರ ಮಹಿಳಾ ರೈತರು ಷೇರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಕೃಷಿ, ಪಶುಸಂಗೋಪನೆ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮತ್ತು ಅತಿ ಸಣ್ಣ ಮಹಿಳಾ ಉತ್ಪಾದಕರು ಈ ಕಂಪನಿಯ ಸಾಮೂಹಿಕ ಒಡೆತನ ಹೊಂದಿದ್ದಾರೆ ಎಂದರು.
ರೈತ ಮಹಿಳೆಯರಿಗೆ ಸ್ವ-ಉದ್ಯೋಗ ಚಟುವಟಿಕೆಗೆ ಅವಕಾಶ ಕಲ್ಪಿಸುವುದರೊಂದಿಗೆ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಸೂಕ್ತ ಮೌಲ್ಯವರ್ಧನೆ ಒದಗಿಸಲಿದ್ದು, ಮಹಿಳೆಯರ ಜೀವನೋಪಾಯ ವೃದ್ಧಿಗೆ ಈ ಕಂಪನಿ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮೊದಲಾದವರಿದ್ದರು.
.jpg)
.jpg)
.jpg)