ಶ್ರೀಕೃಷ್ಣನಿಂದ ಅಧರ್ಮ ಅನೀತಿ ನಾಶ

ಲೋಕಬಂಧು ನ್ಯೂಸ್ | ಉಡುಪಿ, ಸೆ.4
ಸಮಾಜದಲ್ಲಿದ್ದ ಅಧರ್ಮ, ಅನೀತಿ ಹಾಗೂ ಅತ್ಯಂತ ಕೆಟ್ಟ ವ್ಯವಸ್ಥೆ ಉಂಟಾದಾಗ ಮಹಾನ್ ಚೇತನರು ಜನಿಸುತ್ತಾರೆ ಎನ್ನುವುದಕ್ಕೆ ಶ್ರೀಕೃಷ್ಣ ಶ್ರೇಷ್ಠ ನಿದರ್ಶನ. ಆತ ವಿಷ್ಣುವಿನ ಎಂಟನೇ ಅವತಾರವಾಗಿ ಜನಿಸುವುದರೊಂದಿಗೆ ಸಾವಿರಾರು ವರ್ಷಗಳ ಹಿಂದೆ ಅಧರ್ಮ, ಅನೀತಿ ವಿನಾಶ ಮಾಡಿದ ಮಹಾನ್ ಚೇತನ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಉಡುಪಿ ಶ್ರೀಕೃಷ್ಣನ ನಾಡು. ಇಲ್ಲಿನ ಜನತೆಯ ಬಹುದೊಡ್ಡ ಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿ. ಉಡುಪಿಯಲ್ಲಿ ಅತ್ಯಂತ ಸಂಭ್ರಮದಿಂದ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಗುತ್ತಿದ್ದು ವೇಷಧಾರಿಗಳು ವಿವಿಧ ಬಗೆಯ ವೇಷ ತೊಟ್ಟು ನಗರದಾದ್ಯಂತ ಸಂಚರಿಸಿ, ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದಾರೆ. ಕಲೆ ಮತ್ತು ಸಂಸ್ಕೃತಿ ಉಳಿದಾಗ ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಸಾಧ್ಯ ಎನ್ನುವುದಕ್ಕೆ ಈ ಹಬ್ಬ ದೊಡ್ಡ ಉದಾಹರಣೆ.


ಸರ್ವಧರ್ಮ, ಸಹಬಾಳ್ವೆಯ ಜೀವನ ಶೈಲಿ ಉಡುಪಿ ಜಿಲ್ಲೆಯ ಜನರಲ್ಲಿ ಕಾಣಬಹುದು ಎಂದವರು ಹೇಳಿದರು.


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ದುಷ್ಟರನ್ನು ಶಿಕ್ಷಿಸಿ ಶಿಷ್ಟರ ರಕ್ಷಣೆಗಾಗಿ ಜನ್ಮ ತಾಳಿದ ಶ್ರೀಕೃಷ್ಣ, ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರವಾಗಿ ನಿಂತು ಧರ್ಮಕ್ಕೆ ಜಯ ತಂದುಕೊಟ್ಟ ಆದರ್ಶ ಪುರುಷ ಎಂದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲ ಆದರ್ಶಗಳು, ಸಲಹೆ, ಮಾರ್ಗದರ್ಶನಗಳು ಭಗವದ್ಗೀತೆಯಲ್ಲಿದೆ. ಶ್ರೀಕೃಷ್ಣ, ಸಾವಿರಾರು ವರ್ಷಗಳ ಹಿಂದೆ ಭಗವದ್ಗೀತೆಯ ಮೂಲಕ ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ಅದನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮಲ್ಲಿ ಸಾರ್ಥಕತೆಯ ಭಾವ ಕಾಣಬಹುದು ಎಂದರು.


ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ ಸಿದ್ಧಾಪುರ ವಿಶೇಷ ಉಪನ್ಯಾಸ ನೀಡಿ, ಧರ್ಮ ರಕ್ಷಿಸುವ ನಿಟ್ಟಿನಲ್ಲಿ ಮಹಾವಿಷ್ಣುವಿನ ಅವತಾರವಾಗಿರುವ ಕೃಷ್ಣನನ್ನು ದೇವರನ್ನಾಗಿ ಮಾತ್ರವಲ್ಲದೆ ಆತನ ಜೀವನ ಶೈಲಿಯನ್ನು ನೋಡಿ ಕಲಿಯಲು ಬಹಳಷ್ಟು ನಿದರ್ಶನಗಳಿವೆ. ಹಿಂದೂ ಧರ್ಮೀಯರು ಶ್ರೀಕೃಷ್ಣನನ್ನು ಅನಾದಿ ಕಾಲದಿಂದಲೂ ಆರಾದಿಸುತ್ತಾ ಬಂದಿದ್ದಾರೆ. ದೇಶ- ವಿದೇಶಗಳಲ್ಲಿಯೂ ಶ್ರೀಕೃಷ್ಣನ ಭಕ್ತರಿದ್ದಾರೆ.


ಸಾವಿರಾರು ಗೋಪಿಕಾ ಸ್ತ್ರೀಯರಿಗೆ ರಕ್ಷಣೆ ನೀಡುವುದರೊಂದಿಗೆ ಕುರುಕ್ಷೇತ್ರ ಯುದ್ಧದಲ್ಲಿ ಧರ್ಮದ ರಕ್ಷಣೆಗಾಗಿ ಶ್ರೀಕೃಷ್ಣ ಪರಮಾತ್ಮ ತೆಗೆದುಕೊಂಡ ನಿರ್ಧಾರ ಸತ್ಯದ ದಾರಿಯಾಗಿದೆ. ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಎಲ್ಲಾ ಕಾಲಕ್ಕೂ 'ಸಂಭವಾಮಿ ಯುಗೇ ಯುಗೇ' ಎಂದು ಹೇಳಿ ಧರ್ಮೋದ್ಧಾರಕನಾಗಿ, ಜಗದೋದ್ಧಾರಕನಾಗಿ ಶ್ರೀಕೃಷ್ಣ ನಿಂತಿದ್ದಾನೆ.


ಆತ ಸಲಹೆಗಾರ, ತತ್ವಜ್ಞಾನಿ, ಯೋಗಿ, ಯೋಧ, ರಾಜತಾಂತ್ರಿಕ ಮತ್ತು ಮಾರ್ಗದರ್ಶಕ ಹೀಗೆ ಬಹುಪಾತ್ರಗಳಲ್ಲಿ ಯಶಸ್ವಿಯಾಗಿ ಕಾಣಿಸಿಕೊಳ್ಳುತ್ತಾನೆ ಎಂದರು.


ಶ್ರೀಕೃಷ್ಣನ ಸಂದೇಶದಂತೆ ಸುಖ- ದುಃಖ, ನೋವು - ನಲಿವು, ಲಾಭ- ನಷ್ಟಗಳನ್ನು ಸಮಾನವಾಗಿ ಕಾಣಬೇಕು. ಮನಸ್ಸಿನ ಸ್ಥಿತಪ್ರಜ್ಞೆ ಅಗತ್ಯ. ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಸಮಯಕ್ಕೆ ಅನುಗುಣವಾಗಿ ಬದಲಾಗಬೇಕು. ಭಗವದ್ಗೀತೆಯ ವಿಚಾರಗಳು ನಮ್ಮ ಬದುಕನ್ನು ರೂಪಿಸುವ ಶಕ್ತಿಯಾಗಿದ್ದು, ಆ ಮೂಲಕ ನಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ನಿರೂಪಿಸಿದರು. ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಪೂರ್ಣಿಮಾ ವಂದಿಸಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕ ಸುಬ್ರಹ್ಮಣ್ಯ ಶೆಟ್ಟಿ ಇದ್ದರು.