ಲೋಕಬಂಧು ನ್ಯೂಸ್ | ಉಡುಪಿ, ಸೆ.1
ಯಾವುದೇ ವಿದ್ಯೆಯನ್ನು ಅಧ್ಯಯನ ಮಾಡುವುದಾದರೂ ಅದರಲ್ಲಿ ಶೇ.5ರಷ್ಟು ಭಾರತೀಯ ಜ್ಞಾನ ಪರಂಪರೆಗೆ ಸಂಬಂಧಿಸಿದ ವಿಚಾರ ಕಲಿಸುವ ಅವಕಾಶ ಇರಬೇಕು. ಅನಾರೋಗ್ಯ ಮೊದಲಾದ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಭಾರತೀಯ ಜ್ಞಾನ ಪರಂಪರೆಯಲ್ಲಿ ಏನು ಉತ್ತರ ಸಿಗಬಹುದು ಎಂದು ಕಂಡುಹುಡುಕಬೇಕು. ಭಾರತೀಯ ಜ್ಞಾನವಿದ್ಯೆಗೆ ಪೂರಕವಾದ ಸಂಸ್ಕೃತ ಭಾಷೆಯ ಅಧ್ಯಯನ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿನಯಚಂದ್ರ ಬನವತಿ ಹೇಳಿದರು.
ಪರ್ಯಾಯ ಶೀರೂರು ಶ್ರೀಕೃಷ್ಣಮಠ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆದ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ (ಎಸ್ಎಮ್ಎಸ್.ಪಿ) ಸಂಸ್ಕೃತ ಮಹಾವಿದ್ಯಾಲಯದ 122ನೇ ವರ್ಧಂತ್ಯುತ್ಸವ ಮತ್ತು ಸಂಸ್ಕೃತೋತ್ಸವ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಇಹ-ಪರ ಲೋಕಗಳೆರಡಕ್ಕೂ ಸಂಬಂಧಿಸಿದ ಪ್ರಯೋಜನ ಸಂಸ್ಕೃತ ಭಾಷೆಯಿಂದ ಸಿಗುತ್ತದೆ. ವೇದಾಂತ ವಿದ್ಯೆಯ ಅಧ್ಯಯನ ಹೆಚ್ಚು ಹೆಚ್ಚು ನಡೆಯಬೇಕು ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು, ಸಂಸ್ಕೃತದ ಅಧ್ಯಯನ ಕೇವಲ ಪ್ರಮಾಣಪತ್ರ ಪಡೆಯುವ ದೃಷ್ಟಿಯಿಂದ ನಡೆಯಬಾರದು. ಕಲಿತ ವಿದ್ಯೆಯನ್ನು ಇನ್ನಷ್ಟು ಜನರಿಗೆ ಹಂಚಬೇಕು. ಅದೂ ದೇವರಿಗೆ ಮಾಡುವ ಸೇವೆ ಎಂದರು.
ಸೇವಾ ನಿವೃತ್ತರಾಗಲಿರುವ ಎಸ್ಎಮ್ಎಸ್.ಪಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ಎಮ್., ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಕಾಲೇಜಿನ ಉಪನ್ಯಾಸಕ ಡಾ.ಅಜಿತ ಕುಮಾರ ಆಚಾರ್ಯ ಪಿ. ಅವರನ್ನು ಗೌರವಿಸಲಾಯಿತು.
ಗತ ಶೈಕ್ಷಣಿಕ ವರ್ಷದಲ್ಲಿ ಆಚಾರ್ಯ ತರಗತಿಯ ಅಧ್ಯಯನ ಪೂರೈಸಿದ ವಿದ್ಯಾರ್ಥಿಗಳಿಗೆ ವಿದ್ವತ್ ಶಾಲು ನೀಡಲಾಯಿತು.
ಎಸ್ಎಮ್ಎಸ್.ಪಿ. ಸಭಾ ಕಾರ್ಯದರ್ಶಿ ಗೋಪಾಲಕೃಷ್ಣ ಜೋಯಿಸ್, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಉಪಸ್ಥಿತರಿದ್ದರು.
ಪ್ರಾಚಾರ್ಯ ಪ್ರೊ.ಡಿ.ಎಸ್. ಅಮೃತೇಶ ಆಚಾರ್ಯ ಸ್ವಾಗತಿಸಿ, ಪ್ರೊ.ಸತ್ಯನಾರಾಯಣ ವಿ. ರಾವ್ ವಂದಿಸಿದರು. ಡಾ.ಮಹೇಶ ಭಟ್ಟ ಆರ್. ಹಾರ್ಯಾಡಿ ನಿರೂಪಿಸಿದರು. ವಿದ್ಯಾರ್ಥಿ ಲಗಳಾದ ಪ್ರಹ್ಲಾದ, ಸೀತಾರಾಮ ಬನ್ನಿಂತಾಯ, ನಿತಿನ್, ಆದಿತ್ಯಕೃಷ್ಣ ಮತ್ತು ಪ್ರಹ್ಲಾದಮೂರ್ತಿ ವೇದಘೋಷಗೈದರು.
ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ವಿದ್ಯಾರ್ಥಿಗಳಿಂದ 'ಸಂಸ್ಕೃತ ಗೀತಲಹರೀ' ಮತ್ತು ಬಳಿಕ ಪ್ರಸಿದ್ಧ ವಿದ್ವಾಂಸರಿಂದ 'ಸುಧನ್ವಾರ್ಜುನೀಯಮ್' ಸಂಸ್ಕೃತ ತಾಳಮದ್ದಳೆ ನಡೆಯಿತು. ವಿದ್ವಾನ್ ಉಮಾಕಾಂತ ಭಟ್, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಪ್ರೊ.ರಾಮಕೃಷ್ಣ ಪೆಜತ್ತಾಯ ಬಾಳ ಅರ್ಥದಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಯಲ್ಲಿ ಎನ್.ಜಿ. ಹೆಗಡೆ ಯಲ್ಲಾಪುರ ಮತ್ತು ಚಂಡೆಯಲ್ಲಿ ಶಿವಾನಂದ ಕೋಟ ಸಹಕರಿಸಿದರು.
