ಲೋಕಬಂಧು ನ್ಯೂಸ್ | ಉಡುಪಿ, ಸೆ.1
ಮುಸ್ಲಿಂ ಓಲೈಕೆ ನೆಪದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹೇಳಿಕೆಗಳು ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಪ್ರಯತ್ನಗಳು ನಡೆದಲ್ಲಿ ಸರ್ಕಾರವೇ ಭಸ್ಮವಾಗಲಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಬಸವರಾಜ ರಾಯರೆಡ್ಡಿ ಹೇಳಿಕೆ ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆಯನ್ನು ತೋರಿಸುತ್ತದೆ. ಮುಸ್ಲಿಂ ಓಲೈಕೆಗಾಗಿ ಹಿಂದುತ್ವ, ಸನಾತನ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಚಟುವಟಿಕೆಗಳನ್ನು ಅವಹೇಳನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ.
ಸನಾತನ ಧರ್ಮಕ್ಕೆ ಅಪಮಾನ ಮಾಡುವ ಯಾವುದೇ ಹೇಳಿಕೆಗಳನ್ನು ಸಮಾಜ ಸಹಿಸುವುದಿಲ್ಲ ಎಂದರು.
ಬಸವರಾಜ ರಾಯರೆಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅದರ ನೆಪದಲ್ಲಿ ಹಿಂದೂ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಅಪಮಾನ ಮಾಡಬಾರದು ಎಂದು ಸುನಿಲ್ ಕುಮಾರ್ ಎಚ್ಚರಿಸಿದರು.
ಗಣೇಶೋತ್ಸವ, ನವರಾತ್ರಿ ಸೇರಿದಂತೆ ಯಾವುದೇ ಧಾರ್ಮಿಕ ಉತ್ಸವಗಳಿಗೆ ವಿನಾಕಾರಣ ತೊಂದರೆ ನೀಡಬಾರದು. ಧಾರ್ಮಿಕ ಚಟುವಟಿಕೆಗಳಿಗೆ ಅಡೆತಡೆ ಮಾಡುವ ಮೊದಲು ಸರ್ಕಾರ ನೂರು ಬಾರಿ ಯೋಚಿಸಬೇಕು. ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆ ನೀಡಿದರೆ ನಿಮ್ಮ ಅವನತಿ ಗಣೇಶೋತ್ಸವದ ಮೂಲಕವೇ ಆಗಲಿದೆ ಎಂದರು.
