ಜನ್ಮಾಷ್ಟಮಿ ಸಂಭ್ರಮಕ್ಕೆ ಕೃಷ್ಣಮಠ ಸಜ್ಜು

ಲೋಕಬಂಧು ನ್ಯೂಸ್ | ಉಡುಪಿ, ಸೆ.2
ಶ್ರೀಕೃಷ್ಣನ ನಾಡು, ಆಚಾರ್ಯ ಮಧ್ವರ ತಪೋಭೂಮಿ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ ರಂಗೇರುತ್ತಿದೆ. ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಮೊದಲ ಜನ್ಮಾಷ್ಟಮಿಯನ್ನು ವೈಭವೋಪೇತವಾಗಿ ಆಚರಿಸಲು ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಪ್ರಮುಖ ಕಾರ್ಯಕ್ರಮ ನಡೆಯುವ ರಥಬೀದಿಯಲ್ಲಿ ಮೊಸರು ಕುಡಿಕೆ ಸಂಭ್ರಮಾಚರಣೆಗೆ ಗುರ್ಜಿಗಳ ಅಳವಡಿಕೆ ಕಾರ್ಯ ನಡೆದಿದೆ. ಮಡಿಕೆಗಳಿಗೆ ಬಣ್ಣ ಬಳಿದು ಸಿಂಗರಿಸಲಾಗುತ್ತಿದೆ.
ಸೆಪ್ಟೆಂಬರ್ 4 ಮತ್ತು 5ರಂದು ಉಡುಪಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ನಡೆಯಲಿದ್ದು, ಸೆ.5ರಂದು ವಿಟ್ಲಪಿಂಡಿ (ಮೊಸರು ಕುಡಿಕೆ) ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಮೊಸರು ಕುಡಿಕೆ ಸಂಭ್ರಮಾಚರಣೆಯ ವೀಕ್ಷಣೆಗೆ ದೇಶ ವಿದೇಶದಿಂದ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸುತ್ತಾರೆ. ಆ ಹಿನ್ನಲೆಯಲ್ಲಿ ರಥಬೀದಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಚರಂಡಿ ಮತ್ತಿತರ ಕಡೆಗೆ ಬ್ಲೀಚಿಂಗ್ ಪೌಡರ್ ಹಾಕಲಾಗುತ್ತಿದೆ.


ವಿವಿಧ ಸ್ಪರ್ಧೆಗಳು
ಪರ್ಯಾಯ ಶೀರೂರು ಮಠದಿಂದ ಶ್ರೀಕೃಷ್ಣನ ಬಾಲಲೀಲೆಯನ್ನು ನೆನಪಿಸುವ ವಿವಿಧ ಸಾಂಪ್ರದಾಯಿಕ ಕ್ರೀಡೆಗಳು, ಸಂಗೀತ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆ, ಮೊಸರು ಕಡೆಯುವ ಸ್ಪರ್ಧೆ, ಶಂಖ ಊದುವ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಮಡಕೆಗೆ ಚಿತ್ತಾರ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮೊದಲಾದವು ಕಳೆದ ಆ.1ರಿಂದಲೇ ವಾರಾಂತ್ಯದಲ್ಲಿ ಸಂಪನ್ನಗೊಂಡಿವೆ.


ಸೆ.4ರಂದು ಶ್ರೀಕೃಷ್ಣಮಠದಲ್ಲಿ ಬೆಳಗ್ಗೆ 9.30ರಿಂದ ಮುದ್ದುಕೃಷ್ಣ ಸ್ಪರ್ಧೆ, ಕಿಶೋರ ಕೃಷ್ಣ- ರಾಧಾಕೃಷ್ಣ ಮೊದಲಾದ ಸ್ಪರ್ಧೆಗಳು ನಡೆಯಲಿವೆ. ಪರ್ಯಾಯ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಆಶಯದಂತೆ ಈ ಬಾರಿ ಸೆ.4 ಮತ್ತು 5ರಂದು ಕರಾವಳಿಯ ಜನಪ್ರಿಯ ಹುಲಿವೇಷ ಹಾಗೂ ಜಾನಪದ ಸ್ಪರ್ಧೆ ಆಯೋಜಿಸಲಾಗಿದೆ. ರಾಜಾಂಗಣದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.


ಉಂಡೆ- ಚಕ್ಕುಲಿ ತಯಾರಿ
ಲಕ್ಷಾಂತರ ಭಕ್ತಾದಿಗಳಿಗೆ ಹಂಚಲು ಲಾಡು, ಚಕ್ಕುಲಿಗಳು ಲಕೋಪಲಕ್ಷ ಸಂಖ್ಯೆಯಲ್ಲಿ ಸಿದ್ಧಗೊಳ್ಳುತ್ತಿವೆ. ಶಾಲಾ ಮಕ್ಕಳಿಗೂ ಉಂಡೆ ಚಕ್ಕುಲಿ ಪ್ರಸಾದ ವಿತರಿಸಲಾಗುತ್ತಿದೆ ಎಂದು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.


ವಿಟ್ಲಪಿಂಡಿಯ ದಿನ ಮಹಾಪೂಜೆಯ ಅನಂತರ ಊರ-ಪರವೂರ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ಜೊತೆಗೆ ವಿಶೇಷ ಖಾದ್ಯಗಳ ಪ್ರಸಾದ ವಿತರಣೆ ನಡೆಯಲಿದ್ದು ಸುಮಾರು 1.5 ಲಕ್ಷದಷ್ಟು ಚಕ್ಕುಲಿ, ತಲಾ 30 ಸಾವಿರದಷ್ಟು ಐದು ಬಗೆಯ ವಿವಿಧ ಉಂಡೆಗಳು, ಸುಮಾರು ಇಪ್ಪತ್ತು ಕ್ವಿಂಟಾಲ್ ಬೆಲ್ಲ ಮತ್ತು ಏಳು ಕ್ವಿಂಟಾಲ್ ಸಕ್ಕರೆ ಬಳಸಿದ ವಿವಿಧ ಭಕ್ಷ್ಯ, ತಿನಿಸುಗಳು ಆ ದಿನದ ಪ್ರಸಾದ ವಿತರಣೆಯ ವಿಶೇಷ. ಅದಕ್ಕಾಗಿ ಸುಮಾರು 80 ಮಂದಿ ಬಾಣಸಿಗರು ಉಂಡೆ-ಚಕ್ಕುಲಿ ತಯಾರಿಯಲ್ಲಿ ತೊಡಗಿದ್ದಾರೆ.
ಅಷ್ಟಮಿಗೆ ಮೂಡೆ ಹಾಗೂ ತೆಂಗಿನ ಹಾಲು ಬಹು ಜನಪ್ರಿಯ. ಹಾಗಾಗಿ ಮೂಡೆ ಮಾಡಲು ಬೇಕಾದ ತೊಟ್ಟೆ (ಕೊಟ್ಟೆ), ಮಕ್ಕಳ ಮನರಂಜನೆಯ ಪೇಟ್ಲ ಇತ್ಯಾದಿಗಳನ್ನು ಖರೀದಿಸಲು ರಥಬೀದಿಯಲ್ಲಿ ಜನರ ದಂಡು ಜಮಾಯಿಸಿದೆ. ಮೂಡೆ ತೊಟ್ಟೆ 20 ರೂ.ಗೆ 3- 4ರಂತೆ ಮಾರಾಟವಾಗುತ್ತಿದೆ. ಹೊರ ಜಿಲ್ಲೆಗಳಿಂದ ಸೇವಂತಿಗೆ, ಗೊಂಡೆ, ಗುಲಾಬಿ ಹೂವಿನ ವ್ಯಾಪಾರಸ್ಥರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.