ಭಾರತ್ ಜೋಡೊ ರಾಜಕೀಯ ಉದ್ದೇಶಕ್ಕೆ ಬಳಕೆಯಾಗದಿರಲಿ

ಲೋಕಬಂಧು ನ್ಯೂಸ್ | ಉಡುಪಿ, ಸೆ.3
ಭಾರತ್ ಜೋಡೋ ಹೆಸರಿನಲ್ಲಿ ಯುವಕರನ್ನು ಸಂಘಟಿಸಿ ಅವರಲ್ಲಿ ರಾಷ್ಟ್ರಭಕ್ತಿ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ಉದ್ದೇಶಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಸರಕಾರಿ ಹಣ ಮತ್ತು ವ್ಯವಸ್ಥೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಬಾರದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೊ ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಅನುಮಾನ ಮೂಡಿದರೆ ಪ್ರತಿಪಕ್ಷವಾಗಿ ಪ್ರಶ್ನಿಸುವುದು ನಮ್ಮ ಕರ್ತವ್ಯ. ಸರಕಾರದ ಕ್ರಮಗಳನ್ನು ಎಚ್ಚರಿಕೆಯಿಂದ ಗಮನಿಸುತ್ತೇವೆ ಎಂದರು.


ಧಾರ್ಮಿಕ ಆಚರಣೆಗಳಿಗೆ ಅತಿ ನಿರ್ಬಂಧ ಬೇಡ
ಒಂದು ಧರ್ಮವನ್ನು ಶ್ರೇಷ್ಠವೆಂದು ಪ್ರತಿಪಾದಿಸುವಾಗ ಮತ್ತೊಂದು ಧರ್ಮದ ಭಾವನೆಗಳಿಗೆ ನೋವಾಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಗೌರವಿಸುವುದು ನಮ್ಮ ಕರ್ತವ್ಯ. ಕರ್ನಾಟಕದಲ್ಲಿ ಗಣೇಶೋತ್ಸವ ಹಾಗೂ ಶಾರದೋತ್ಸವಗಳು ಹಿಂದೂಗಳ ಧಾರ್ಮಿಕ ನಂಬಿಕೆಗಳ ಪ್ರತೀಕ. ಗಣೇಶೋತ್ಸವ ಮೆರವಣಿಗೆಗಳಿಗೆ ಅನುಮತಿ ನೀಡುವ ನೆಪದಲ್ಲಿ ಕಠಿಣ ನಿಯಮಗಳನ್ನು ಹೇರಬಾರದು. ನಿಗದಿತ ಸಮಯದ ಹೆಸರಿನಲ್ಲಿ ಭಕ್ತರಿಗೆ ಅನಗತ್ಯ ತೊಂದರೆ ನೀಡಬಾರದು. ನಿಯಮಗಳಿಂದ ಗಣೇಶ ವಿಸರ್ಜನೆಯೇ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು.


ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯಕ್ಕೂ ಗೌರವ ನೀಡಬೇಕು. ಯಾವುದೇ ಒಂದು ಧರ್ಮದ ಆಚರಣೆಗಳನ್ನು ಪರೋಕ್ಷವಾಗಿ ನಿಯಂತ್ರಿಸುವಂತಾಗಬಾರದು. ಸರಕಾರ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಗೌರವಿಸಬೇಕು.


ಸರಕಾರಿ ಹಣ ಹಾಗೂ  ಸಂಪನ್ಮೂಲಗಳ ಬಳಕೆಯಲ್ಲೂ ಪಾರದರ್ಶಕತೆ ಇರಬೇಕು. ಸಾರ್ವಜನಿಕ ಹಿತವೇ ಸರಕಾರದ ಆದ್ಯತೆಯಾಗಬೇಕು ಎಂದರು.


ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಜನರಲ್ಲಿ ಗೊಂದಲ ಹಾಗೂ ಆತಂಕವಿದೆ. ಮಾಧವ ಗಾಡ್ಗಿಳ್ ವರದಿ ಬಳಿಕ ಕಸ್ತೂರಿ ರಂಗನ್ ಸಮಿತಿ ರಚಿಸಲಾಗಿತ್ತು. ಎರಡೂ ವರದಿಗಳ ಸಾಧಕ ಬಾಧಕಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ಕಲ್ಲು ತೆಗೆಯಬಾರದು, ಕಟ್ಟಡ ನಿರ್ಮಿಸಬಾರದು ಎಂಬ ಆತಂಕದಿಂದ ಜನರಿಗೆ ಮುಕ್ತಿ ದೊರೆಯಬೇಕು. ಹಳೆಯ ಮನೆಗಳ ದುರಸ್ತಿಗೂ ತೊಂದರೆಯಾಗದಂತೆ ಸರಕಾರ ಸ್ಪಷ್ಟತೆ ನೀಡಬೇಕು. ರೈತರು ಹಾಗೂ ಸಾರ್ವಜನಿಕರ ಜೀವನಕ್ಕೆ ತೊಂದರೆಯಾಗದ ರೀತಿಯಲ್ಲಿ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.


ತಜ್ಞರ ಸಮಿತಿ ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಜನರ ಪರವಾಗಿ ಸರಕಾರದೊಂದಿಗೆ ಸಹಕಾರ ನೀಡಲು ಸಂಸದರು ಸಿದ್ದರಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ನಮ್ಮ ಸಹಮತವಿದೆ. ಸ್ಥಳೀಯ ಸಮಸ್ಯೆಗಳಿಗೆ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.