ಕಸ್ತೂರಿ ರಂಗನ್ ವರದಿಯ ಸಾಧಕ- ಬಾಧಕ ಪರಿಶೀಲನೆಗೆ ಸರ್ಕಾರಕ್ಕೆ ಪತ್ರ

ಲೋಕಬಂಧು ನ್ಯೂಸ್ | ಮಣಿಪಾಲ, ಸೆ.3
ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿರುವ ಕರಡು ಅಧಿಸೂಚನೆ ವರದಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಈಗಾಗಲೇ ಅರಣ್ಯ ಇಲಾಖೆಯ ನೀತಿ ನಿಯಮಗಳಿಂದ ತೊಂದರೆಗೊಳಗಾಗಿರುವ ಕಾಡಂಚಿನ ಭಾಗದ ಜನರಿಗೆ ಮತ್ತಷ್ಟು ತೊಂದರೆಯಾಗಲಿದೆ. ಆದರೆ, ವರದಿಯ ಕರಡು ಪ್ರತಿಯಲ್ಲಿ ಕೋರೆ, ಕೈಗಾರಿಕೆ, ಬಹುಮಹಡಿ ಕಟ್ಟಡಗಳು, ಟೌನ್'ಶಿಪ್, ಥರ್ಮಲ್ ಪವರ್ ಪ್ಲಾಂಟ್ ಹಾಗೂ ಏರಿಯಾ ಡೆವಲಪ್'ಮೆಂಟ್ ಪ್ರೊಜೆಕ್ಟ್'ಗಳಿಗೆ ನಿರ್ಬಂಧ ಇದ್ದು, ಆ ಬಗ್ಗೆ ಪೂರ್ವಾಪರಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.


ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ, ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಈಗಾಗಲೇ 7 ಬಾರಿ ಅಧಿಸೂಚನೆ ಹೊರಡಿಸಿದೆ. ಕಾಡಿನಲ್ಲಿ ವಾಸಿಸುವ ಮಲೆಕುಡಿಯ, ಕೊರಗ ಮತ್ತಿತರ ಬುಡಕಟ್ಟು ಜನಾಂಗದ ಅನೇಕ ಕುಟುಂಬಗಳನ್ನು ಆತಂಕಕ್ಕೀಡುಮಾಡಿದೆ. ಅನೇಕ ವರ್ಷಗಳಿಂದ ಪ್ರಕೃತಿಯೊಂದಿಗೆ ಸಮತೋಲಿತ ಜೀವನ ಶೈಲಿ ಅಳವಡಿಸಿಕೊಂಡು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಗೌರವಿಸುತ್ತಲೇ ಬದುಕುತ್ತಿದ್ದಾರೆ. ಈ ಅನೋನ್ಯ ಭಾವ ಇಂದಿಗೂ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತಿವೆ. ಪರಿಸರ ಸಂರಕ್ಷಣೆಯೂ ನಮ್ಮ ಆದ್ಯತೆಯಾಗಬೇಕು. ಅದನ್ನು ಗಮನಹರಿಸಲಾಗುವುದು ಎಂದರು.


ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕಾರ್ಕಳದ 13 ಹಾಗೂ ಕುಂದಾಪುರದ 22 ಸೇರಿದಂತೆ ಒಟ್ಟು 35 ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಲಿವೆ. ಪರಿಸರ ಸೂಕ್ಷ್ಮ ಪ್ರದೇಶದ ಮಧ್ಯ ಭಾಗದಲ್ಲಿಯೂ ವಸತಿ ಪ್ರದೇಶವಿರುವುದರಿಂದ ಕೂಲಂಕಷವಾಗಿ ಪರಿಶೀಲಿಸಬೇಕಿದೆ ಎಂದರು.


ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಮಾತನಾಡಿ, ಸರಕಾರಗಳು ಜಾರಿಗೆ ತರುವ ನೀತಿ ನಿಯಮಗಳು ಹಾಗೂ ಕಾನೂನುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಕೃಷಿ, ಪರಿಸರ, ಸಾರ್ವಜನಿಕರ ದೈನಂದಿನ ಬದುಕಿನ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಸಮಗ್ರವಾಗಿ ವಿಶ್ಲೇಷಿಸುವ ಅಗತ್ಯವಿದೆ ಎಂದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಯಾವುದೇ ಕಾಯಿದೆಗಳು ಜನತೆಯ ಒಳಿತಿಗೆ ಅನುಗುಣವಾಗಿರಬೇಕು. ಸೂಕ್ಷ್ಮತೆಯನ್ನು ಅರಿತು ಪರಿಸರ ಕಾಪಾಡಿದಲ್ಲಿ ಮಾತ್ರ ಮನುಕುಲ ಉಳಿಯಲು ಸಾಧ್ಯ. ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸರ್ವೇ ನಂಬರ್ ಅಳವಡಿಸಿದಲ್ಲಿ ಪರಿಸರ ರಕ್ಷಣೆ ಮಾಡಬಹುದು. ಎಲ್ಲಾ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಜನಾಂಗ ಬದುಕಲು ಅನುಕೂಲ ಮಾಡಿಕೊಡಬೇಕು ಎಂದರು.


ಡಾ.ಕೆ.ಕಸ್ತೂರಿ ರಂಗನ್ ಕರಡು ಅಧಿಸೂಚನೆಯನ್ನು ವಿರೋಧಿಸುವುದಾಗಿ ತಿಳಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, ಪ್ರತಿರೋಧವನ್ನು ಸರ್ಕಾರದ ಗಮನಕ್ಕೆ ತರಬೇಕು. ಪರಿಸರ ಸೂಕ್ಷ್ಮ ವಲಯ ವಸತಿ ಪ್ರದೇಶದಿಂದ ಹೊರಗಿರಬೇಕು. ಜಿಲ್ಲೆಯ 35 ಗ್ರಾಮಗಳ ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಸರಿಯಾದ ಭೌತಿಕ ಸರ್ವೇ ಮಾಡಿ ವರದಿ ಕಳಿಸುವಂತೆ ತಿಳಿಸಿದರು.


ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸರಕಾರಗಳು ಜಾರಿಗೆ ತರುವ ಕೆಲವು ಕಾನೂನುಗಳು ಜನಸಾಮಾನ್ಯರ ಮೇಲೆ ದುಷ್ಪರಿಣಾಮಗಳುಂಟು ಮಾಡುತ್ತವೆ. ಅವುಗಳನ್ನು ಜಾರಿಗೆ ತರುವ ಮುನ್ನ ಜನರ ಆಕ್ಷೇಪಣೆಗಳನ್ನೂ ಆಲಿಸಿ ಪರಾಮರ್ಶಿಸಿ ಜಾರಿಗೆ ತರಬೇಕು. ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯ ಪ್ರದೇಶ ಯಾವ ಗ್ರಾಮಗಳಲ್ಲಿ, ಯಾವ ಸರ್ವೇ ನಂಬರ್ ಒಳಗೊಂಡಿವೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ ಅದರ ಗಡಿ ಗುರುತಿಸಬೇಕು. ಪ್ರತೀ ಗ್ರಾಮ ಮಟ್ಟದಲ್ಲಿ ಈ ಕರಡು ವರದಿ ಬಗ್ಗೆ ಚರ್ಚಿಸಿ ವರದಿ ನೀಡುವುದು ಒಳಿತು ಎಂದರು.


ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಯಾವುದೇ ವರದಿಯನ್ನು ಜಾರಿಗೆ ತರುವ ಮುನ್ನ ಜನರಿಗೆ ಆಗುವ ತೊಂದರೆಗಳು, ಅನುಕೂಲಗಳು ಹಾಗೂ ಸಿಗುವ ಸೌಲಭ್ಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗಿರುವುದು ಕಾಡಂಚಿನ ಜನರಿಗೆ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಥವಾ ವರದಿ ಜಾರಿ ಮಾಡಲು ಸೂಚಿಸಿರುವ ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತರುವ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದು, ಅದನ್ನು ಸರಿಯಾಗಿ ಮಾಡಬೇಕು ಎಂದರು.


ಸಭೆಯಲ್ಲಿ ಡಿ.ಎಫ್.ಓ ರುಥ್ರೇನ್ ಪಿ., ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್.ಪಿ ಸುಧಾಕರ್ ನಾಯಕ್, ಸಹಾಯಕ ಕಮೀಷನರ್ ರಶ್ಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.