ಕೃಷ್ಣನ ಸ್ಮರಣೆಯಿಂದ ಕಷ್ಟ ದೂರ

ಲೋಕಬಂಧು ನ್ಯೂಸ್ ಉಡುಪಿ, ಸೆ.3
ಭಗವಂತನ ಸ್ಮರಣೆಯಿಂದ ಕಷ್ಟ ದೂರವಾಗುತ್ತವೆ ಎಂದು ಪರ್ಯಾಯ ಪೀಠಾಧೀಶ ಶೀರೂರು‌ ಮಠಾಧಿಪತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದ್ದಾರೆ.ಕೃಷ್ಣಾಷ್ಟಮಿ ಸಂದೇಶ ನೀಡಿರುವ ಅವರು 'ಪರಮಾತ್ಮನ ಎಲ್ಲಾ ಅವತಾರಗಳು ಧರ್ಮ ಸ್ಥಾಪನೆಗಾಗಿ, ಅಧರ್ಮದ ನಾಶಕ್ಕಾಗಿ, ದುಷ್ಟ ಜನರನ್ನು ಸಂಹಾರ ಮಾಡಲು ಆಗಿದೆ. ಸಜ್ಜನರಿಗೆ ಯಾವ ರೀತಿ ಜೀವನ ನಡೆಸಬೇಕು ಎನ್ನುವ ಪಾಠವನ್ನು ಶ್ರೀರಾಮ, ಶ್ರೀಕೃಷ್ಣ ಮೊದಲಾದ ಅವತಾರಗಳಿಂದ ಪರಮಾತ್ಮ ನೀಡಿದ್ದಾನೆ.


ರಾಕ್ಷಸರು ಎಂಟು ದಿಕ್ಕಿನಲ್ಲಿ ಎಲ್ಲಿಯೇ ಇರಲಿ ಅವರನ್ನೆಲ್ಲರನ್ನೂ ಸಂಹಾರ ಮಾಡುವುದನ್ನು ತೋರಿಸಲು ಶ್ರೀಕೃಷ್ಣ ಅಷ್ಟಮಿಯ ಮಧ್ಯರಾತ್ರಿ ಜನಿಸಿದ್ದಾನೆ. ರಾಕ್ಷಸರ ಸಂಹಾರ ಆಗಿದೆ, ಧರ್ಮ ಸ್ಥಾಪನೆ ಮಾಡಿದ್ದಾನೆ. ಅಷ್ಟಮಿ ಸಂದರ್ಭದಲ್ಲಿ ಶ್ರೀಕೃಷ್ಣನನ್ನು ನಾವು ಆರಾಧನೆ ಮಾಡಿದರೆ ಅಷ್ಟದಿಕ್ಕುಗಳಿಂದ ಬರುವ ತೊಂದರೆಗಳು, ಮಾನಸಿಕ, ದೈಹಿಕ ತೊಂದರೆಗಳನ್ನು ವಿಶೇಷವಾಗಿ ಈಗಿನ ಮಾನಸಿಕ ತೊಂದರೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವೈರಿಗಳನ್ನು ದೂರ ಮಾಡಿಕೊಳ್ಳಬಹುದು. ಅದನ್ನೆಲ್ಲವನ್ನು ಶ್ರೀಕೃಷ್ಣನ ಸ್ಮರಣೆಯಿಂದ ಸಂಹಾರ ಮಾಡಿಕೊಳ್ಳಬಹುದು.


ಶ್ರೀಕೃಷ್ಣ ಭಗವದ್ಗೀತೆಯಲ್ಲಿ ನಮಗೆಲ್ಲರಿಗೂ ಅರ್ಜುನನ ಮೂಲಕ ಉಪದೇಶ ನೀಡಿದ್ದಾನೆ. ಆ ರೀತಿಯಲ್ಲಿ ನಾವೆಲ್ಲರೂ ಬಾಳಲು ಪ್ರಯತ್ನಪಡಬೇಕು.


ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರದಲ್ಲಿ ಭಕ್ತರು ಪಾಲ್ಗೊಂಡು ಶ್ರೀಕೃಷ್ಣನ ಧ್ಯಾನ ಮಾಡುತ್ತಾ ದೇವರ ಕೃಪೆಗೆ ಪಾತ್ರರಾಗೋಣ ಎಂದು ಶ್ರೀಪಾದರು  ತಿಳಿಸಿದ್ದಾರೆ.