ಲೋಕಬಂಧು ನ್ಯೂಸ್ | ಉಡುಪಿ, ಸೆ.3
ಥೈಲ್ಯಾಂಡ್'ನಲ್ಲಿ ನಡೆದ 'ಜೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್' ಫ್ಯಾಷನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಪ್ರಥಮ ಪ್ರಶಸ್ತಿ ಹಾಗೂ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಉಡುಪಿ ಪುತ್ತೂರು ನಿವಾಸಿ ಸಚಿನ್ ರಾವ್ ಹಾಗೂ ಅಶ್ವಿನಿ ರಾವ್ ದಂಪತಿ ಪುತ್ರಿ ಸಚಿತ ರಾವ್, ಪ್ರಸ್ತುತ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಆಗಸ್ಟ್ 19ರಿಂದ 22ರ ವರೆಗೆ ಥೈಲ್ಯಾಂಡ್'ನಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆಯೂ ಉತ್ತಮ ಪ್ರದರ್ಶನ ನೀಡಿದ ಸಚಿತ ರಾವ್, ಅಂತಿಮವಾಗಿ ಪ್ರಥಮ ಸ್ಥಾನ ಪಡೆದು ಕಿರೀಟ ತನ್ನದಾಗಿಸಿಕೊಂಡಿರುವುದಾಗಿ ಆಕೆಯ ತಂದೆ ಸಚಿನ್ ರಾವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿತ ರಾವ್ ಈವರೆಗೆ ಎಂಟು ವಿವಿಧ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದು, ಎಲ್ಲಾ ಎಂಟು ಸ್ಪರ್ಧೆಗಳಲ್ಲೂ ಪ್ರಶಸ್ತಿ ಗಳಿಸಿರುವುದು ವಿಶೇಷ. ಮಗಳ ನಿರಂತರ ಪರಿಶ್ರಮ, ವೇದಿಕೆ ಮೇಲಿನ ಆತ್ಮವಿಶ್ವಾಸ ಹಾಗೂ ಕುಟುಂಬದ ಪ್ರೋತ್ಸಾಹ ಈ ಸಾಧನೆಗೆ ಕಾರಣ ಎಂದವರು ಹೇಳಿದರು.
ಸಚಿತ ರಾವ್ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಮುಂದೆಯೂ ಫ್ಯಾಷನ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಗುರಿ ಹೊಂದಿದ್ದು ಭವಿಷ್ಯದಲ್ಲಿ 'ಮಿಸ್ ಯೂನಿವರ್ಸ್' ಆಗಬೇಕು ಎಂಬ ಕನಸಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಚಿತ ರಾವ್ ಅವರ ತಾಯಿ ಅಶ್ವಿನಿ ರಾವ್, ಮೇಕಪ್ ಆರ್ಟಿಸ್ಟ್ ನಾಗಶ್ರೀ ಆರ್., ದೀಪಿಕಾ, ಯಶಸ್ವಿನಿ ದೇವಾಡಿಗ ಹಾಗೂ ವಸಂತ್ ಉಪಸ್ಥಿತರಿದ್ದರು.
.jpg)
.jpg)