ಲೋಕಬಂಧು ನ್ಯೂಸ್ ನವದೆಹಲಿ, ಸೆ.4
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ 39ನೇ ಚಾತುರ್ಮಾಸ್ಯ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಶ್ರೀಕೃಷ್ಣಾಷ್ಟಮಿ ಉತ್ಸವವನ್ನು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಜಲಸಾರಿಗೆ ರಾಜ್ಯ ಸಚಿವ ಹಾಗೂ ದೆಹಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹರ್ಷ ಮಲ್ಹೋತ್ರಾ ಅವರು ಸೆ.3ರಂದು ಗುರುವಾರ ಉದ್ಘಾಟಿಸಿ ಶುಭ ಹಾರೈಸಿದರು.ಸಂಸದೆ ಮೀನಾಕ್ಷಿ ಲೇಖಿ, ಶಾಸಕರಾದ ಅನಿಲ್ ಶರ್ಮಾ, ಅಜಯ್ ಮಹಾವೀರ್ , ಜೋಧಪುರದ ನಾಮಧಾರಿ ಸಂಪ್ರದಾಯದ ಸಂತ ಶ್ರೀನಿವಾಸ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಉಡುಪಿ ಮೂಲದ ಹಿರಿಯ ಐಎಎಸ್ ಅಧಿಕಾರಿ ಚಂಢೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೇಶ್ ಪ್ರಸಾದ್ ಅವರಿಗೆ ಪೇಜಾವರ ಮಠ ವತಿಯಿಂದ ನೀಡಲಾದ ಜನ್ಮಾಷ್ಟಮಿ ಪುರಸ್ಕಾರವನ್ನು ಶ್ರೀಪಾದರು ಪ್ರದಾನಿಸಿ ಅಭಿನಂದಿಸಿದರು.ಸನ್ಮಾನಕ್ಕುತ್ತರಿಸಿದ ರಾಜೇಶ್ ಪ್ರಸಾದ್ ಅವರು ಪೇಜಾವರ ಮಠದ ಮೂಲಕ ದಶಕಗಳಿಂದ ದೇಶಕ್ಕೆ ವಿಶೇಷವಾಗಿ ಸನಾತನ ಧರ್ಮ, ಸಂಸ್ಕೃತಿ ಸಂರಕ್ಷಣೆ ಕಾರ್ಯಕ್ಕೆ ಒದಗುತ್ತಿರುವ ಬಹುಮುಖಿ ಸೇವೆ ಹಾಗೂ ಮಾರ್ಗದರ್ಶನ ಬೆಲೆ ಕಟ್ಟಲಾಗದ್ದು ಎಂದು ಬಣ್ಣಿಸಿದರು.
ಮುಂಬಯಿ ವಕೀಲ ವಿಜಯ ಕುಲಕರ್ಣಿ ಶುಭಾಶಂಸನೆಗೈದರು. ಡಾ.ವಿಠೋಬಾಚಾರ್ಯ, ರಾಕೇಶ್ ಗೌರ್, ಅಶ್ವಿನ್ ಕಕ್ರಣ್ಣಾಯ ಉಪಸ್ಥಿತರಿದ್ದರು.