ಲೋಕಬಂಧು ನ್ಯೂಸ್ | ಶೃಂಗೇರಿ, ಸೆ.2
ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರಾಕೃತಿಕ ವಿಕೋಪಕ್ಕೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಕಷ್ಟದಲ್ಲಿರುವ ನೇಪಾಳದ ಸಂತ್ರಸ್ತರ ಕಣ್ಣೀರೊರೆಸಲು ಶ್ರೀಮಠದಿಂದ ತುರ್ತು ನೆರವಿನ ಹಸ್ತ ನೀಡಲಾಗಿದ್ದು, ಅಗತ್ಯವಿರುವ ಸಂಪೂರ್ಣ ಪರಿಹಾರ ಹಾಗೂ ನೆರವು ಒದಗಿಸಲು ಶ್ರೀಮಠ ಸಿದ್ಧವಾಗಿದೆ ಎಂದು ಶ್ರೀಗಳು ಅಭಯ ನೀಡಿದ್ದಾರೆ.
ದುರಂತದಲ್ಲಿ ಜೀವ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿರುವ ಜಗದ್ಗುರುಗಳು, ತಮ್ಮ ಪ್ರೀತಿಯ ಸೂರು ಮತ್ತು ಆಪ್ತರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಕುಟುಂಬಗಳಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಾಂತ್ವನ ನೀಡಿದ್ದಾರೆ.
ನೇಪಾಳದಲ್ಲಿ ಸೃಷ್ಟಿಯಾಗಿರುವ ಈ ಭೀಕರ ಅಭಾವದ ವಾತಾವರಣ ಶಮನಗೊಂಡು ಜನ ಜೀವನ ಶೀಘ್ರದಲ್ಲಿ ಸಹಜ ಸ್ಥಿತಿಗೆ ಮರಳಲಿ ಎಂದು ಶ್ರೀಗಳು ಹಾರೈಸಿದ್ದಾರೆ.
