ಗುರುಕುಲ ಗೋಶಾಲೆಗಳ ಪೋಷಣೆ ಅಗತ್ಯ

ಲೋಕಬಂಧು ನ್ಯೂಸ್ | ನವದೆಹಲಿ, ಸೆ.3
ಸಂಸ್ಕೃತ ಭಾರತೀಯ ಸಂಸ್ಕೃತಿಯ ಜೀವಾಳ. ವೇದ ಮತ್ತು ಸಂಸ್ಕೃತವನ್ನು ಬೋಧಿಸಿಕೊಂಡು ಬರುತ್ತಿರುವ ಗುರುಕುಲಗಳಿಗೆ ಅಗತ್ಯ ಆರ್ಥಿಕ ಮತ್ತು ಇತರ ಸೌಕರ್ಯ ಕಲ್ಪಿಸುವುದು ಮತ್ತು ಗೋರಕ್ಷಣೆ ಕಾರ್ಯ ನಿರ್ವಹಿಸುತ್ತಿರುವ ಗೋಶಾಲೆಗಳ ಪೋಷಣೆ ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದು ದೆಹಲಿ ಸರ್ಕಾರವನ್ನು ಸಂತ ಸಂಗಮ ಆಗ್ರಹಿಸಿದೆ.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಚಾತುರ್ಮಾಸ್ಯ ಸಂದರ್ಭದಲ್ಲಿ ಬುಧವಾರ ವಸಂತ್ ಕುಂಜ್'ನಲ್ಲಿ ನಡೆದ ಸಂತ ಸಂಗಮದಲ್ಲಿ ಪಾಲ್ಗೊಂಡ ಸಾಧು ಸಂತರು ಈ ಸಂಬಂಧ ಸರ್ಕಾರವನ್ನು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ನಡೆದ ಸಮಾವೇಶದಲ್ಲಿ ದೆಹಲಿ ಪ್ರಾಂತದಿಂದ ನೂರಕ್ಕೂ ಅಧಿಕ ಸಂತರು ಭಾಗವಹಿಸಿದ್ದರು. ವರ್ತಮಾನದ ಸನಾತನ ಧರ್ಮ ಹಾಗೂ ರಾಷ್ಟ್ರೀಯ ವಿಚಾರಗಳ ಕುರಿತು ಸಂತರು ಮಂಥನ ನಡೆಸಿದರು. ಕೊನೆಯಲ್ಲಿ ಹತ್ತು ನಿರ್ಣಯಗಳನ್ನು ಅಂಗೀಕರಿಸಿ ದೆಹಲಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ದೇಶ ವಿದೇಶಗಳಲ್ಲಿ ಸನಾತನ ಧರ್ಮರಕ್ಷಣೆಗೆ ಸಲ್ಲಿಸಿದ ಸೇವೆಗಾಗಿ ಪೇಜಾವರ ಮಠ ವತಿಯಿಂದ ಧರ್ಮಭೂಷ ಣ ಪ್ರಶಸ್ತಿ ನೀಡಿ ಶ್ರೀಗಳು ನೀಡಿ  ಗೌರವಿಸಿದರು.


ಸಂದೇಶ ನೀಡಿದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತರು ಎಂದಿಗೂ ಜಗತ್ತಿನ ಒಳಿತಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ರಾಮ ರಾಜ್ಯ ನಿರ್ಮಾಣದಲ್ಲೂ ಸಂತರ ಪಾತ್ರ ಅಮೂಲ್ಯವಾದುದು. ಹಾಗಾಗಿ ರಾಮರಾಜ್ಯ ನಿರ್ಮಾಣಕ್ಕೂ ಸಂತರು ನಿರಂತರ ಮಾರ್ಗದರ್ಶನ ನೀಡುವಂತಾಗಬೇಕು ಎಂದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು.


ವಿಹಿಂಪ ಧರ್ಮಾಚಾರ್ಯ ಸಂಪರ್ಕ ಪ್ರಮುಖ್ ದೀಪಕ್ ಜಿ. ಕಾರ್ಯಕ್ರಮ ಸಂಯೋಜಿಸಿದರು. ವೇದವ್ಯಾಸ ಗುರುಕುಲದ ಆಡಳಿತಾಧಿಕಾರಿ ರಾಕೇಶ್ ಗೌರ್ ಸ್ವಾಗತಿಸಿದರು. ಮಹಾನಿಧಿ ಆಚಾರ್ಯ ಅವರು ಉಡುಪಿ ಮಠದ ಇತಿಹಾಸ ಮತ್ತು ಪರಂಪರೆ ಬಗ್ಗೆ ತಿಳಿಸಿದರು. ಶ್ರೀಗಳ ಆಪ್ತ ಕಾರ್ಯದರ್ಶಿ ಅಶ್ವಿನ್ ಕಕ್ರಣ್ಣಾಯ ವಂದಿಸಿದರು. ವಿಹಿಂಪ ಪ್ರಾಂತ ಸಂಘಟನಾ ಮಂತ್ರಿ ಸುಬೋಧ್ ಜಿ. ಉಪಸ್ಥಿತರಿದ್ದರು. ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ ವಿಠೋಭಾಚಾರ್ಯ ಸಹಕರಿಸಿದರು.


ಕಾರ್ಯಕ್ರಮಕ್ಕೂ ಮೊದಲು ಶ್ರೀಕೃಷ್ಣಧಾಮದಲ್ಲಿ ಕೃಷ್ಣದೇವರಿಗೆ ಮಂಗಳಾರತಿ ಬೆಳಗಿ, ಸಂತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗುರುಕುಲದ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಪೇಜಾವರ ಮಠದ ಪಿಆರ್.ಒ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದರು.