ದಾರ್ಶನಿಕರು, ಸ್ವಾತಂತ್ರ್ಯ ಹೋರಾಟಗಾರರ ಜೀವನಾದರ್ಶ ಅನುಕರಣೀಯ

ಲೋಕಬಂಧು ನ್ಯೂಸ್ | ಮಣಿಪಾಲ
ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆಗೆ ಶ್ರಮಿಸಿದ ದಾರ್ಶನಿಕರ ಆದರ್ಶ ಹಾಗೂ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೋರಾಟಗಾರರ ಜೀವನ ತತ್ವಗಳನ್ನು ಜನಸಾಮಾನ್ಯರು ಅರ್ಥೈಸಿಕೊಂಡು ಪಾಲಿಸಿದಾಗ ಜಯಂತಿ ಕಾರ್ಯಕ್ರಮಗಳು ಸಾರ್ಥಕತೆ ಹೊಂದುತ್ತವೆ ಎಂದು ಉಡುಪಿ ಶಾಸಕ ಯಶಪಾಲ್ ಎ‌. ಸುವರ್ಣ ಹೇಳಿದರು.
ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಶ್ರೀ ಮಧ್ವಾಚಾರ್ಯರ ಜಯಂತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಧ್ವಾಚಾರ್ಯರು ಹಾಗೂ ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


ಸಮಾಜದ ಸುಧಾರಣೆ, ಸಮ ಸಮಾಜ ನಿರ್ಮಾಣ ಹಾಗೂ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹನೀಯರು, ದಾರ್ಶನಿಕರು, ವೀರ ಮಹಿಳೆಯರು, ವೀರ ಪುರುಷರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು.


ಭಾರತೀಯ ಆಧ್ಯಾತ್ಮಿಕ ಚಿಂತಕ ಮತ್ತು ನೈತಿಕ ಮೌಲ್ಯಗಳ ಪ್ರತಿಪಾದಕ ಆಚಾರ್ಯ ಮಧ್ವರ ಜಯಂತಿಯನ್ನು ಪ್ರಸಕ್ತ ಸಾಲಿನಿಂದ ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಸಂತಸದ ಸಂಗತಿ. ಉಡುಪಿಯ ಪಾಜಕ ಕ್ಷೇತ್ರದ ಪುಣ್ಯ ಭೂಮಿಯಲ್ಲಿ ಅವತರಿಸಿದ ಮಧ್ವಾಚಾರ್ಯರು ನಡೆದಾಡಿದ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಜೀವನ ನಡೆಸುತ್ತಿರುವುದು ಉಡುಪಿಯ ಜನತೆಯ ಪಾಲಿಗೆ ಹೆಮ್ಮೆಯ ವಿಷಯ ಎಂದರು.


ಮಲ್ಪೆ ಕಡಲ ತೀರದಿಂದ ಶ್ರೀಕೃಷ್ಣನ ಮೂರ್ತಿಯನ್ನು ತಂದು ಉಡುಪಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಪ್ರತಿಷ್ಠಾಪಿಸಿ ಅಷ್ಟಮಠಗಳ ಯತಿಗಳೇ ಪೂಜಿಸುವ ಪರಂಪರೆಯ ಮೂಲಕ ಉಡುಪಿಯನ್ನು ಜಗತ್ತಿಗೆ ಪರಿಚಯಿಸಿದ ಆಚಾರ್ಯ ಮಧ್ವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಶ್ರೀಕೃಷ್ಣ ಮಠದ ಅಷ್ಟಮಠಗಳ ಯತಿಗಳ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ವೈಭವಯುತವಾಗಿ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಉಡುಪಿಯಲ್ಲಿ ಆಯೋಜಿಸುವ ಆಶಯ ವ್ಯಕ್ತಪಡಿಸಿದರು. ತುಳು ಭಾಷೆಗೆ ಮಧ್ವಾಚಾರ್ಯರು ವಿಶೇಷ ಮಾನ್ಯತೆ ನೀಡಿದ್ದರು. ಇಂದಿಗೂ ಅಷ್ಟಮಠಗಳ ಯತಿಗಳು ತುಳು ಲಿಪಿಯಲ್ಲಿಯೇ ಸಹಿ ಮಾಡುವ ಮೂಲಕ ತುಳುವಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದರು.


ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಪ್ರಥಮ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮಳ ವೀರ, ಶೌರ್ಯ ಗುಣಗಳನ್ನು ಮಹಿಳೆಯರೂ  ಅಳವಡಿಸಿಕೊಳ್ಳಬೇಕುಹ ಎಂದರು.


ಮಂಗಳೂರಿನ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ದ್ವೈತ ಸಿದ್ಧಾಂತದ ಪ್ರತಿಪಾದಕ ಮಧ್ವಾಚಾರ್ಯರ ತತ್ವಗಳು ಅನುಕರಣೀಯ. ಜಲಸಂಪನ್ಮೂಲದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಬದುಕು ಕಟ್ಟಿಕೊಡುವ ಕೆಲಸವನ್ನು ಆಗಿನ ಕಾಲದಲ್ಲಿಯೇ ಅವರು ಮಾಡಿದ್ದರು ಎಂದರು.


ಕಿತ್ತೂರು ರಾಣಿ ಚೆನ್ನಮ್ಮಳ ವೀರಗುಣಗಳನ್ನು ಸ್ತ್ರೀಯರು ಅಳವಡಿಸಿಕೊಳ್ಳಬೇಕು. ವಿಸ್ತೀರ್ಣದಲ್ಲಿ ಪುಟ್ಟ ರಾಜ್ಯವಾಗಿದ್ದ ಕಿತ್ತೂರಿನ ಮೇಲೆ ಬ್ರಿಟಿಷರು ಆಕ್ರಮಣ ಮಾಡಿದಾಗ ಎದೆಗುಂದದೆ ಹೋರಾಡಿದ ಕೀರ್ತಿ ರಾಣಿ ಚೆನ್ನಮ್ಮ ಅವರದ್ದು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಚೆನ್ನಮ್ಮನ ಧೈರ್ಯ ಇಂದಿನ ಸಮಾಜದಲ್ಲಿ ಮಹಿಳೆಯರು ಅನುಸರಿಸಬೇಕು. ದೇಶ ಹಾಗೂ ನಾಡಿನಲ್ಲಿ ಜನಿಸಿದ ಸಮಾಜ ಸುಧಾರಕರು, ದಾರ್ಶನಿಕರು, ವಚನಕಾರರು, ಹೋರಾಟಗಾರರು ತಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಮಾಡಿದ್ದರು ಎಂದರು.


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಉಡುಪಿಗೆ ಕೃಷ್ಣನಗರಿ ಎಂಬ ಹಿರಿಮೆ ದೊರೆಯುವಲ್ಲಿ ಮಧ್ವಾಚಾರ್ಯರು ಕಾರಣ. ಶ್ರೀಕೃಷ್ಣನ ನಿರಂತರ ಪೂಜೆ ಹಾಗೂ ದ್ವೈತ ತತ್ವದ ಪ್ರಚಾರಕ್ಕಾಗಿ ಮಧ್ವಾಚಾರ್ಯರು ಎಂಟು ಮಂದಿ ಶಿಷ್ಯರನ್ನು ನೇಮಿಸಿ, ಅಷ್ಟ ಮಠಗಳನ್ನು ಸ್ಥಾಪಿಸಿದರು. ಕಿತ್ತೂರು ರಾಣಿ ಚೆನ್ನಮ್ಮನ ವೀರಗುಣಗಳನ್ನು ಸ್ತ್ರೀಯರು ಅಳವಡಿಸಿಕೊಳ್ಳಬೇಕು ಎಂದರು.


ಉಡುಪಿ ಶ್ರೀ ವಾದಿರಾಜ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಬಿ.ಗೋಪಾಲಾಚಾರ್ ಅವರು ಶ್ರೀ ಮಧ್ವಾಚಾರ್ಯರ ಕುರಿತು ಉಪನ್ಯಾಸ ನೀಡಿ ಭಾರತೀಯ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಸೇವೆ ಸಲ್ಲಿಸಿದ ಮಧ್ವಾಚಾರ್ಯರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುತ್ತಿರುವುದು ಸಂತೋಷದ ವಿಷಯ. ತುಳುನಾಡು, ತುಳು ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ ಮಧ್ವಾಚಾರ್ಯರ ತತ್ವಗಳು ಸಾರ್ವಕಾಲಿಕ ಎಂದರು.


ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಉಪನ್ಯಾಸ ನೀಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಕರ್ನಾಟಕದ ಕಿತ್ತೂರು ಸಂಸ್ಥಾನದ ರಾಣಿ. ಬಾಲ್ಯದಲ್ಲಿಯೇ ಬಿಲ್ಲುಗಾರಿಕೆ, ಕತ್ತಿ ವರಸೆ, ಕುದುರೆ ಸವಾರಿ ಮೊದಲಾದ ವಿದ್ಯೆಗಳಲ್ಲಿ ಪರಿಣತಿ ಹೊಂದಿದ್ದರು. ಚೆನ್ನಮ್ಮಳ ಸ್ವಾಭಿಮಾನ ಮತ್ತು ಹೋರಾಟದ ಮನೋಭಾವ ಅವರನ್ನು ಇತಿಹಾಸದಲ್ಲಿ ಇಂದಿಗೂ ಅಜರಾಮರರಾಗಿಸಿದೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್‌. ಕಾದ್ರೋಳ್ಳಿ, ತುಳು ಶಿವಳ್ಳಿ ಮಾಧ್ವ ಮಹಾಮಂಡಲ ಅಧ್ಯಕ್ಷ ಜಯರಾಮ ಆಚಾರ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಿರಂಜನ ಚೋಳಯ್ಯ ಮೊದಲಾದವರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಉಪನ್ಯಾಸಕ ರಾಮಾಂಜಿ ನಿರೂಪಿಸಿ, ವಂದಿಸಿದರು.