ಲೋಕಬಂಧು ನ್ಯೂಸ್ ಪಡುಬಿದ್ರಿ
ಭೂಗತ ಪಾತಕಿ ಹೇಮಂತ ಪೂಜಾರಿ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ದೂರವಾಣಿ ಕರೆ ಮಾಡಿ, ಕೋಟ್ಯಂತರ ರೂ. ಹಣಕ್ಕೆ ಬೇಡಿಕೆಯಿಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ.ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಐದು, ಶಿರ್ವ, ಕಾಪು ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಪ್ರಕರಣಗಳ ತನಿಖೆ ಮುಂದುವರಿದಿದ್ದು, ಈ ಕೃತ್ಯಗಳಲ್ಲಿ ಭಾಗಿಯಾಗಿ ಪಾತಕಿ ಹೇಮಂತ ಪೂಜಾರಿಗೆ ನೆರವಾಗಿರುವ ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ಭಟ್ರತೋಟ ಹೌಸ್ ನಿವಾಸಿ ಸುರೇಶ್ ಅಮೀನ್ (38)ನನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣವೊಂದರಲ್ಲಿ ದೂರುದಾರರು ಬೇಡಿಕೆಯಿಟ್ಟ ಹಣ ನೀಡದೆ, ದೂರವಾಣಿ ಕರೆಗೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರನ್ನು ಕೊಲೆ ಮಾಡುವ ಸಂಚು ರೂಪಿಸಲಾಗಿತ್ತು ಎನ್ನುವುದು ತಾಂತ್ರಿಕ ಸಾಕ್ಷ್ಯಗಳಿಂದ ತಿಳಿದುಬಂದಿದ್ದು, ಆ ಕೃತ್ಯಕ್ಕೆ ಸಂಬಂಧಿಸಿ ಭೂಗತ ಪಾತಕಿ ಹೇಮಂತ್ ಪೂಜಾರಿ, ಸುರೇಶ್ ಅಮೀನ್ಗೆ ಕಳುಹಿಸಿದ್ದ ಐದು ಲಕ್ಷ ರೂ. ಪೈಕಿ ಖರ್ಚಾದ ಮೊತ್ತವನ್ನು ಹೊರತುಪಡಿಸಿ ಉಳಿದ 4,13,000 ರೂ.ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಪ್ರಕರಣಗಳಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.