ಕಡಲು ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ

ಲೋಕಬಂಧು ನ್ಯೂಸ್ ಉಡುಪಿ
ಕರಾವಳಿಯ ನೈಜ ಮತ್ತು ಅತಿದೊಡ್ಡ ಸಂಪತ್ತಾಗಿರುವ ಸಮುದ್ರದ ಸದ್ಬಳಕೆಗಾಗಿ ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಸರಕಾರ ಅನುಮೋದನೆ ನೀಡಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.ಜಿಲ್ಲಾಡಳಿತ ಉಡುಪಿ ವತಿಯಿಂದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.



ಸರಕಾರಿ ಮೀನುಗಾರಿಕಾ ಕಾಲೇಜಿನಲ್ಲಿ ಈ ನೀತಿಯಡಿ ಕರ್ನಾಟಕ ಮರೈನ್ ಟೆಕ್ನಾಲಜಿ ಮತ್ತು ಬ್ಲ್ಯೂ ಎಕಾನಮಿ ಸಂಸ್ಥೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಯನ್ನು 60ರಿಂದ 200ಕ್ಕೆ ಏರಿಸಲು ನಿರ್ಧರಿಸಲಾಗಿದೆ ಎಂದರು.


ಉಡುಪಿ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದೆ. ಜಿಲ್ಲೆಯ ತ್ರಾಸಿ ಮತ್ತು ಮರವಂತೆ ಬೀಚುಗಳಲ್ಲಿ ಲಭ್ಯವಿರುವ 7.07 ಎಕರೆ ಭೂಮಿಯನ್ನು ಬಳಸಿಕೊಂಡು 48 ಕೋ.ರೂ. ವೆಚ್ಚದಲ್ಲಿ ರೆಸಾರ್ಟ್‌ ಮತ್ತು ವಿವಿಧ ಮನರಂಜನಾ ಪಾರ್ಕ್ ಹಾಗೂ ಕ್ರೀಡಾ ಚಟುವಟಿಕೆಗಳನ್ನು ರೂಪಿಸಲು ಮತ್ತು ಉತ್ತೇಜನ ನೀಡುವುದಾಗಿ ತಿಳಿಸಿದರು.


ಸರ್ಕಾರದ ಗ್ಯಾರಂಟಿ ಯೋಜನೆಗಳು, ಪ್ರಜಾಸೇವಾ ಇಲಾಖೆ, ಮೀನುಗಾರಿಕಾ ಲಿಂಕ್ ರಸ್ತೆಗಳ ನಿರ್ವಹಣೆ, ಯುವ ಜನರಿಗೆ ಅನುಕೂಲ ಕಲ್ಪಿಸುವ ಭಾರತ್ ಜೋಡೋ ಯುವ ಸಂಘಗಳು, ಗುಣಮಟ್ಟದ ಆರೋಗ್ಯ ಸೇವೆ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ, ತೋಟಗಾರಿಕೆ ಮತ್ತು ಕೃಷಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹ, ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ, ಕರಾವಳಿಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ `ಕಲಾ ನಡಿಗೆ ನಿಮ್ಮ ಬಳಿಗೆ' ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಒತ್ತುನೀಡಲಾಗಿದೆ ಎಂದರು.


ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್'ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಸಚಿವರು, ಉಡುಪಿ ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಪಾತ್ರವಾಗಿರುವುದನ್ನೂ ಉಲ್ಲೇಖಿಸಿದರು.


ಯಕ್ಷಗಾನ, ದೈವಾರಾಧನೆ, ಭೂತಕೋಲ, ನಾಗಮಂಡಲ, ಕೃಷಿ ಸಂಸ್ಕೃತಿಯ ಕಂಬಳ, ಹುಲಿವೇಷ ಇತ್ಯಾದಿ ದೇಶ-ವಿದೇಶಗಳಲ್ಲಿ ಕನ್ನಡದ ಮಾನ ಸಮ್ಮಾನಗಳಿಗೆ ಪಾತ್ರವಾಗಿವೆ.


ಸಹಜವಾಗಿಯೇ ಬುದ್ದಿವಂತರು ಮತ್ತು ಪ್ರಜ್ಞಾವಂತರ ನೆಲ ಮತ್ತು ನೆಲೆಯಾದ ಉಡುಪಿ ಜಿಲ್ಲೆಯಲ್ಲಿ ಬುದ್ದಿವಂತ ಮಕ್ಕಳಿದ್ದಾರೆ, ವಿದ್ಯಾರ್ಥಿಗಳಿದ್ದಾರೆ ಎಂದ ಸಚಿವ ಅರ್ಷದ್, ಶೇ.95.53 ಸಾಕ್ಷರತಾ ಪ್ರಮಾಣದೊಂದಿಗೆ ಉಡುಪಿ ಜಿಲ್ಲೆಯನ್ನು ರಾಜ್ಯದ ಮೊದಲ ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಘೋಷಿಸಿದರು.


ಕಾರ್ಯಕ್ರಮದಲ್ಲಿ ಶಾಸಕ ಯಶಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ ಮೊದಲಾದವರಿದ್ದರು.


ಕಾರ್ಯಕ್ರಮಕ್ಕೂ ಮುನ್ನ ಬೋರ್ಡ್ ಹೈಸ್ಕೂಲ್'ನಿಂದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ವರೆಗೆ ನಡೆದ ಭುವನೇಶ್ವರಿ ದೇವಿಯ ಮೆರವಣಿಗೆಗೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಸ್ಥಬ್ಧಚಿತ್ರಗಳು ಭಾಗವಹಿಸಿದ್ದವು.


ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ ಸ್ತಬ್ದಚಿತ್ರಗಳಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಥಮ, ಉಡುಪಿ ನಗರಸಭೆ ದ್ವಿತೀಯ ಹಾಗೂ ಕೃಷಿ ಇಲಾಖೆ ತೃತೀಯ ಸ್ಥಾನ ಪಡೆದವು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಬಲಪಾಡಿ ಕಿದಿಯೂರು ವಿದ್ಯಾಸಮುದ್ರ ಆಂಗ್ಲಮಾಧ್ಯಮ ಶಾಲೆ ಪ್ರಥಮ, ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಮತ್ತು ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೃತೀಯ ಸ್ಥಾನ ಹಾಗೂ ಮಲ್ಪೆ ನಾರಾಯಣ ಗುರು ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ಅಲೆವೂರು ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಶಾಲೆ ಸಮಾಧಾನಕರ ಬಹುಮಾನ ಪಡೆದವು.


ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಪಥ ಸಂಚಲನದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳತ್ತೂರು ಸಂತೆಕಟ್ಟೆ ಪ್ರಥಮ ಹಾಗೂ ವಳಕಾಡು ಸರಕಾರಿ ಪ್ರಾಥಮಿಕ ಶಾಲೆ (ಸೇವಾದಳ) ದ್ವಿತೀಯ ಸ್ಥಾನ, ಪ್ರೌಢಶಾಲಾ ವಿಭಾಗದಲ್ಲಿ ಕಡಿಯಾಳಿ ಯು.ಕಮಲಾಬಾಯಿ ಪ್ರೌಢಶಾಲೆ ಎನ್.ಸಿ.ಸಿ ನೇವಿ ಪ್ರಥಮ, ಮಣಿಪಾಲ ಮಾಧವ ಕೃಪಾ ಪ್ರೌಢಶಾಲೆ ಎನ್.ಸಿ.ಸಿ ಆರ್ಮಿ ದ್ವಿತೀಯ ಹಾಗೂ ಕುಂಜಾರುಗಿರಿ ಆನಂದತೀರ್ಥ ವಿದ್ಯಾಲಯ ಪ್ರೌಢಶಾಲೆ ಎನ್.ಸಿ.ಸಿ ಆರ್ಮಿ ತೃತೀಯ ಸ್ಥಾನ ಪಡೆದವು. ಕಾಲೇಜು ವಿಭಾಗದಲ್ಲಿ ಕುಂಜಿಬೆಟ್ಟು ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಎನ್.ಸಿ.ಸಿ ನೇವಿ ಪ್ರಥಮ, ಉಡುಪಿ ಪೂರ್ಣಪ್ರಜ್ಞ ಕಾಲೇಜು ಎನ್.ಸಿ.ಸಿ. ನೇವಿ ದ್ವಿತೀಯ ಮತ್ತು ಪೂರ್ಣಪ್ರಜ್ಞ ಕಾಲೇಜು ಎನ್.ಸಿ.ಸಿ ಆರ್ಮಿ ತೃತೀಯ ಸ್ಥಾನ ಪಡೆದವು.


ಡಾ.ರೋಶನ್ ಶೆಟ್ಟಿ ನಿರೂಪಿಸಿದರು.