ಲೋಕಬಂಧು ನ್ಯೂಸ್ ಕಟೀಲು
ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ
ಕಟೀಲು ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಅಕ್ಟೋಬರ್ 30, 31 ಹಾಗೂ ನವೆಂಬರ್ 1ರಂದು
ಮೂರು ದಿನಗಳ ಕಾಲ ನಡೆಯಲಿರುವ 6ನೆಯ ನುಡಿಹಬ್ಬ 'ಭ್ರಮರ ಇಂಚರ' ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಸಾಹಿತಿ ಡಾ.ಬಿ. ಜನಾರ್ದನ ಭಟ್ ಆಯ್ಕೆಯಾಗಿದ್ದಾರೆ.ಬೆಳ್ಮಣ್ಣಿನ ಅವರ ಮನೆಯಲ್ಲಿ ನುಡಿಹಬ್ಬ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
ಪ್ರಾಂಶುಪಾಲ ಡಾ.ವಿಜಯ್ ವಿ., ಡಾ. ಪದ್ಮನಾಭ ಮರಾಠೆ, ರಾಜಶೇಖರ ಎನ್. ಆಹ್ವಾನ ನೀಡಿ ಗೌರವಿಸಿದರು.
ಜನಾರ್ದನ ಭಟ್ ಅವರು ಇಂಗ್ಲಿಷ್, ಕನ್ನಡ ಎಂ.ಎ., ಎಂ.ಫಿಲ್ ಪದವಿಧರರು. ಮಂಗಳೂರು ವಿ.ವಿ.ಯಿಂದ ಪಿಎಚ್‌ಡಿ
ಪಡೆದಿರುವ ಅವರು ಮೂವತ್ತೇಳು ವರ್ಷಗಳ ಕಾಲ ವಿವಿಧ ಸರಕಾರಿ ಪದವಿ ಪೂರ್ವ
ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.
ಉತ್ತರಾಧಿಕಾರ, ಹಸ್ತಾಂತರ, ಕಲ್ಲು ಕಂಬವೇರಿದ ಹುಂಬ ಇತ್ಯಾದಿ ಅನೇಕ ಕಾದಂಬರಿಗಳು, ಕರಾವಳಿಯ ಕವಿರಾಜಮಾರ್ಗ, ಕನ್ನಡ ಕಾದಂಬರಿ ಮಾಲೆ, ವಿನೂತನ ಕಥನ ಕಾರಣ ಮೊದಲಾದ 40ಕ್ಕಿಂತಲೂ ಹೆಚ್ಚು ಸಾಹಿತ್ಯ ವಿಮರ್ಶಾ ಕೃತಿಗಳು, ದಕ್ಷಿಣ ಕನ್ನಡದ ಶತಮಾನದ ಕಾವ್ಯ, ಶತಮಾನದ ಕಥೆಗಳು, ಓಬೀರಾಯನ ಕಾಲದ ಕತೆಗಳಲ್ಲಿ ಸ್ವಾತಂತ್ರ್ಯದ ತೆರೆಗಳು ಮೊದಲಾದ ಸಂಪಾದನ ಗ್ರಂಥಗಳು, ಜಗತ್ಪ್ರಸಿದ್ಧ ಸಣ್ಣ ಕಥೆಗಳು, ಮಕ್ಕಳ ಲೋಕದ ಕಥೆಗಳು
ಸೇರಿದಂತೆ ಇಪ್ಪತ್ತು ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ.
ತುಳು ಸಂಸ್ಕೃತಿ, ಬೆರ್ಮರ ಆರಾಧನೆ ಮತ್ತು ಇತಿಹಾಸದ ಕುರಿತು ಸಂಶೋಧನೆ ನಡೆಸಿ ಕೃತಿಗಳನ್ನು ರಚಿಸಿದ್ದಾರೆ. ಒಂಭತ್ತು ಕಥಾಸಂಕಲನಗಳು, ಮಕ್ಕಳ ಸಾಹಿತ್ಯ ಕೃತಿಗಳು, ಇಂಗ್ಲಿಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಮತ್ತು ತುಳುವಿನಿಂದ ಇಂಗ್ಲಿಷ್‌ಗೆ ಕೃತಿಗಳ ಅನುವಾದ ಹೀಗೆ ಅವರ ಪ್ರಕಟಿತ ಸಾಹಿತ್ಯದ ನಾನಾ ಕೃತಿಗಳ ಸಂಖ್ಯೆ 176 ದಾಟಿದೆ.
ಅಲ್ಲದೆ, ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲೆಗಾಗಿ 285 ಪುಸ್ತಕಗಳನ್ನು
ಸಂಪಾದಿಸಿಕೊಟ್ಟಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಿಗೆ ಪುಸ್ತಕ ವಿಮರ್ಶೆಗಳನ್ನು
ಬರೆದಿದ್ದಾರೆ. ಅವರ ಸಂಶೋಧನಾ ಕೃತಿಗಳು ದೊಡ್ಡ ಹೆಸರು ಮಾಡಿವೆ. ಅನೇಕ ಪತ್ರಿಕೆಗಳಿಗೆ ಅಂಕಣಕಾರರಾಗಿದ್ದಾರೆ.
ಕನ್ನಡ, ತುಳು ಸಾಹಿತ್ಯ ಅಕಾಡೆಮಿ, ವರ್ಧಮಾನ, ಮುದ್ದಣ, ಕಡೆಂಗೋಡ್ಲು ಮೊದಲಾದ ಪ್ರಶಸ್ತಿಗಳಿಗೆ, ಪತ್ರಿಕೆಗಳ ಹತ್ತಾರು ಕಥಾ ಸ್ಪರ್ಧೆಗಳಿಗೆ, ಪುಸ್ತಕ ಪ್ರಶಸ್ತಿಗಳಿಗೆ ತೀರ್ಪುಗಾರರಾಗಿದ್ದರು. ಆಕಾಶವಾಣಿಯಲ್ಲಿ ಅವರ ರೂಪಕಗಳು ಪ್ರಸಾರವಾಗಿವೆ. ಕೃತಿಗಳು ಪದವಿ ತರಗತಿಗಳಿಗೆ ಪಠ್ಯವಾಗಿವೆ. ಶಿವರಾಮ ಕಾರಂತ, ವಿಶುಕುಮಾರ್, ಭೂಪಾಲಂ ದತ್ತಿ,
ಭಾರತೀಸುತ ದತ್ತಿ, ಇನಾಂದಾರ್, ವೀಚಿ, ವ್ಯಾಸರಾಯ ಬಲ್ಲಾಳ, ಮಾಸ್ತಿ ಹೀಗೆ ಹತ್ತಾರು
ಸಾಹಿತ್ಯ ಪ್ರಶಸ್ತಿ ಪುರಸ್ಕೃತರು.
ಕಾರ್ಕಳ ತಾಲೂಕು, ಉಡುಪಿ ಜಿಲ್ಲಾ ಸಾಹಿತ್ಯ
ಸಮ್ಮೇಳನಗಳ ಅಧ್ಯಕ್ಷರಾಗಿ, ನಾನಾ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿರುವ ಉಡುಪಿ ಜಿಲ್ಲೆಯ ಬೆಳ್ಮಣ್ಣಿನವರಾದ ಜನಾರ್ದನ ಭಟ್ಟರ ಸಾಹಿತ್ಯ ಸಾಧನೆ ಅನನ್ಯ, ಅನುಪಮ ಮಾತ್ರವಲ್ಲದೇ ಅಸಾಧಾರಣವಾದುದು.