ಪ್ರಧಾನಿ ಮೋದಿ ತಂದೆ ಕುರಿತ ಖರ್ಗೆ ಹೇಳಿಕೆ ಕಾಂಗ್ರೆಸ್ ಹೀನ‌ ಮನಃಸ್ಥಿತಿಗೆ ಕೈಗನ್ನಡಿ

ಲೋಕಬಂಧು ನ್ಯೂಸ್ ಉಡುಪಿ
ಪ್ರಧಾನಿ ನರೇಂದ್ರ ಮೋದಿಯವರ ತಂದೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಹೀನ ಮನಃಸ್ಥಿತಿಗೆ ಕೈಗನ್ನಡಿ ಹಿಡಿದಿದ್ದಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಅಗಲಿದ ವ್ಯಕ್ತಿಯ ಕುರಿತು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ರಾಜಕೀಯ ಟೀಕೆಗಳು ವಿಚಾರಗಳಿಗೆ ಸೀಮಿತವಾಗಿರಬೇಕು. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ, ಹಿರಿಯ ರಾಜಕೀಯ ನಾಯಕರಾಗಿ ಗುರುತಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂಥ ಹೇಳಿಕೆಗಳು ಶೋಭೆ ತರುವುದಿಲ್ಲ.

ಕ್ಷಮೆಗೆ ಪಟ್ಟು
ರಾಜಕೀಯದಲ್ಲಿ ವಿರೋಧಿಗಳಾಗಿರಬಹುದು. ಆದರೆ, ವೈಯಕ್ತಿಕ ಗೌರವದ ಗಡಿ ದಾಟುವುದು ಘನತೆಗೆ ತಕ್ಕುದಲ್ಲ. ಪ್ರಧಾನಿ ಮೋದಿ ಅವರ ದಿವಂಗತ ತಂದೆಯವರ ಬಗ್ಗೆ ಹಗುರವಾಗಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ‌ ಕೂಡಲೇ ಕ್ಷಮೆ ಕೋರಬೇಕು. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಇಂಥ ಹೇಳಿಕೆ ನೀಡುವ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಿಂದ ತಕ್ಷಣ ವಜಾ ಮಾಡಬೇಕು ಎಂದು ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.