ಲೋಕಬಂಧು ನ್ಯೂಸ್ ಬ್ರಹ್ಮಾವರ
ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು ಮಂಗಳವಾರ ರಾತ್ರಿ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ.ಸುಜಿತ್ ಪಿಂಟೊ ಮನೆಗೆ ಸಾಮಾನು ಪೂರೈಕೆ ಮಾಡುವ ರಿಕ್ಷಾ ಚಾಲಕ ಪ್ರಮೋದ್ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದು ಆತನನ್ನು ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ರೌಡಿಶೀಟರ್ ಸುಜಿತ್ ಪಿಂಟೊ ರಿಕ್ಷಾ ಚಾಲಕ ಪ್ರಮೋದ್ ಗೆ ಹಣ ನೀಡಲು ಬಾಕಿ ಇದ್ದು ಅದೇ ಕಾರಣಕ್ಕೆ ಪ್ರಮೋದ್, ಸುಜಿತ್ ಪಿಂಟೋನನ್ನು ತಾನಿರುವ ಸ್ಥಳಕ್ಕೆ ಬರುವಂತೆ ಕರೆದಿದ್ದ.
ಅದರಂತೆ ಸುಜಿತ್ ಪಿಂಟೊ ಅಲ್ಲಿಗೆ ಹೋಗಿದ್ದು ಇಬ್ಬರೂ ಮದ್ಯದ ಅಮಲಿನಲ್ಲಿ ಹೊಡೆದಾಟ ಮಾಡಿಕೊಂಡಿದ್ದರೆ ಎನ್ನಲಾಗಿದೆ. ಆ ವೇಳೆ ಸಿಟ್ಟಿಗೆದ್ದ ಪ್ರಮೋದ್ ಕಬ್ಬಿಣದ ರಾಡಿನಿಂದ ಸುಜಿತ್ ಪಿಂಟೊನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ರೌಡಿಶೀಟರ್ ಸುಜಿತ್ ಪಿಂಟೊ 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮೀನಗರದಲ್ಲಿ 2020ರಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಹಲವು ಕೊಲೆ ಪ್ರಕರಣಗಳ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆತ ಮೊದಲು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆ ಎಂಬಲ್ಲಿ ವಾಸವಾಗಿದ್ದು ಕೆಲವು ವರ್ಷಗಳ ಹಿಂದೆ ಬ್ರಹ್ಮಾವರಕ್ಕೆ ಶಿಫ್ಟ್ ಆಗಿದ್ದ.
ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.