ಸಹಕಾರ ವ್ಯವಸ್ಥೆಯಿಂದ ಮಧ್ಯಮ ವರ್ಗದವರಿಗೆ ಆರ್ಥಿಕ ಆಸರೆ

ಲೋಕಬಂಧು ನ್ಯೂಸ್ ಉಡುಪಿ
ದೇಶದ ಮೊದಲ‌ ಪ್ರಧಾನಿ ಪಂ.ಜವಹರಲಾಲ್ ನೆಹರೂ ಅವರ ದೂರದೃಷ್ಟಿಯ ಫಲವಾಗಿ ದೇಶದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಹಕಾರ ವ್ಯವಸ್ಥೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಸಮಾಜದ ಬಡವರು, ಮಧ್ಯಮ ವರ್ಗದವರು, ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಆಸರೆ ಒದಗಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅಭಿಪ್ರಾಯ ವ್ಯಕ್ತಪಡಿಸಿದರು.ಬ್ರಹ್ಮಗಿರಿಯಲ್ಲಿನ ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ನವೀಕೃತ ಕಾರ್ಯಾಲಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರ ಸಂಘಗಳು ಕೇವಲ ದಾಖಲೆ ಪತ್ರಗಳನ್ನು ಆಧರಿಸಿ ವ್ಯವಹರಿಸುವುದಿಲ್ಲ. ಬದಲಾಗಿ ವ್ಯಕ್ತಿಯ ಹಿನ್ನೆಲೆ ಹಾಗೂ ಆತನ ಆರ್ಥಿಕ ಪರಿಸ್ಥಿತಿಯನ್ನು ಅರಿತು ನೆರವಿಗೆ ಮುಂದಾಗುತ್ತವೆ. ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸಹಕಾರಿ ಸಂಘಗಳು ಬೆಂಬಲವಾಗಿ ನಿಲ್ಲುತ್ತವೆ. ಈ ವ್ಯವಸ್ಥೆ ಇಲ್ಲದಿದ್ದರೆ ರೈತರು ಮತ್ತು ವ್ಯಾಪಾರಿಗಳು ಆರ್ಥಿಕ ನೆರವಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದರು.ಸಹಕಾರ ಸಂಘಗಳಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕಿದೆ‌. ಆದರ್ಶ ಸಹಕಾರಿ ಸಂಘ ಕಳೆದ 39 ವರ್ಷಗಳಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಜನಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ಹಿರಿಯರು ಹಾಕಿಕೊಟ್ಟಿರುವ ಭದ್ರ ಬುನಾದಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಸಂಘ ಮುಂದಿನ ಪೀಳಿಗೆಗೂ ಆದರ್ಶ ಸಂಸ್ಥೆಯಾಗಿ ಬೆಳೆಯಲಿ ಎಂದು ಆಶಿಸಿದರು.


ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹಾಗೂ ಉದ್ಯಮಿ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.


ಸಂಘದ ಅಧ್ಯಕ್ಷ, ವಕೀಲ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಜಯನ್ ಮಲ್ಪೆ ವಂದಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕರಾದ ಕೃಷ್ಣಮೂರ್ತಿ ಆಚಾರ್ಯ, ಬಿ.ಎಲ್. ನರಸಿಂಹಸ್ವಾಮಿ, ಹರಿದಾಸ ಭಟ್, ಶ್ಯಾಮ ಶೆಟ್ಟಿ, ಶೇಖರ ಶೆಟ್ಟಿ, ಜಿತೇಶ್ ಕುಮಾರ್, ಮಹಮ್ಮದ್ ರಫೀಕ್ ಖಾನ್, ರವಿಪ್ರಕಾಶ್, ಅನಂತ ನಾಯ್ಕ್, ಸುಲೋಚನ ದಾಮೋದರ್ಮ ಮತ್ತು ವಿನಯ ಪ್ರಕಾಶ್ ಉಪಸ್ಥಿತರಿದ್ದರು.


ಕಮಲಶಿಲೆ ಯಕ್ಷಗಾನ ಮೇಳದ ಪ್ರಧಾನ ಭಾಗವತ ಮಧುಕರ ಹೆಗ್ಡೆ ಮಡಾಮಕ್ಕಿ ಅವರನ್ನು ಸನ್ಮಾನಿಸಲಾಯಿತು.