ಸಂವಿಧಾನದಲ್ಲಿ ಸರ್ವರಿಗೂ ಸಮಾನ ಅವಕಾಶ

ಲೋಕಬಂಧು ನ್ಯೂಸ್ ಮಣಿಪಾಲ
ನಮ್ಮೆಲ್ಲರ ಬದುಕು ಸಂವಿಧಾನವನ್ನು ಅವಲಂಬಿಸಿದೆ. ಭಾರತದ ಸಂವಿಧಾನ ಕೇವಲ ರಾಜಕೀಯದ ಬಗ್ಗೆ ಆಸಕ್ತಿ ಇರುವವರಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮೆಲ್ಲರ ದಿನನಿತ್ಯದ ಜೀವನದಲ್ಲೂ ಅದು ಪ್ರಭಾವ ಬೀರುತ್ತಿದೆ. ಸಂವಿಧಾನಕ್ಕೆ ಬದ್ದವಾಗಿ ಸರಕಾರಗಳು ಜನಪರವಾದ ಕಾನೂನು, ನೀತಿ- ನಿಯಮಾವಳಿಗಳನ್ನು ರೂಪಿಸುತ್ತವೆ. ಶಿಕ್ಷಣ, ಜ್ಞಾನ, ಉದ್ಯೋಗ ಎಲ್ಲಾ ಕ್ಷೇತ್ರಗಳಲ್ಲೂ ತಾರತಮ್ಯವಿಲ್ಲದ ಎಲ್ಲರಿಗೂ ಸಮಾನ ಅವಕಾಶಗಳನ್ನು ಸಂವಿಧಾನ ನಮಗೆ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ  ರಿಜ್ವಾನ್ ಅರ್ಷದ್ ಹೇಳಿದರು.ಇಲ್ಲಿನ ಗಣಿತ ನಗರದಲ್ಲಿರುವ ಜ್ಞಾನಸುಧಾ ಕಾಲೇಜಿನ ಶಾಂತಿ ರಮೇಶ್ ಪೈ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಆಶ್ರಯದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳೂ ಸಮಾನ ಅವಕಾಶ ಪಡೆದು ಮುಖ್ಯವಾಹಿನಿಯಲ್ಲಿ ಬೆರೆಯಲು ಸಹಾಯವಾಗುವಂತೆ ಮೀಸಲಾತಿ ನೀಡಲಾಗಿದೆ. ಆಚಾರ- ವಿಚಾರ, ಭಾಷೆ, ಜಾತಿ-ಮತ, ಆಹಾರ ಪದ್ದತಿಗಳಲ್ಲಿ ಭಿನ್ನತೆ ಇದ್ದರೂ, ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದರೆ ಅದಕ್ಕೆ ನಮ್ಮ ಸಂವಿಧಾನವೇ ಕಾರಣ.


ಸ್ವಾತಂತ್ರ್ಯ ಪೂರ್ವದಲ್ಲಿ ರಾಜರ ಆಡಳಿತ ಬಳಿಕ ಬ್ರಿಟಿಷರ ಆಡಳಿತವಿತ್ತು. ಆದರೆ, ಸ್ವಾತಂತ್ರ್ಯಾ ನಂತರ ಜನರೇ ಜನರಿಂದ ಆಳಿಸಿಕೊಳ್ಳುವ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂತು. ಇಂದು ಜನರೇ ತಮ್ಮ ಪ್ರತಿನಿಧಿಗಳನ್ನು ಹಾಗೂ ಸರ್ಕಾರಗಳನ್ನು ಆರಿಸುತ್ತಾರೆ. ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಅವರನ್ನು ಮನೆಗೆ ಕಳುಹಿಸುವ ಅಧಿಕಾರವನ್ನೂ ಸಂವಿಧಾನ ನಮಗೆ ನೀಡಿದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಮಾನವ ಸರಪಳಿ, ಸಂವಿಧಾನ ಪೀಠಿಕೆ ಓದು, ಬೈಕ್ ಮತ್ತು ಸೈಕಲ್ ರ್ಯಾಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸರಕಾರದ ನಿರ್ದೇಶನದಂತೆ ಯುವ ಸಂಸತ್ ಸಭೆಗಳನ್ನು ಈಗಾಗಲೇ ತಾಲೂಕು ಮಟ್ಟದಲ್ಲಿ ಆಯೋಜಿಸಿದ್ದು, ಇದೀಗ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಉತ್ತಮ ವಾಗ್ಮಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದರು.


ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ಕಲಾಪಗಳ ಕಾರ್ಯವೈಖರಿ ಮತ್ತು ಕಾಯ್ದೆ ಕಾನೂನುಗಳ ರಚನೆ ಹೇಗೆ ನಡೆಯುತ್ತದೆ ಎಂಬುದನ್ನು ಯುವಜನರು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಇಂಥ ಅಣಕು ಯುವ ಸಂಸತ್'ಗಳು ಸೂಕ್ತ ವೇದಿಕೆಯಾಗಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಜನರೇ ತಮ್ಮ ಪ್ರಭುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಜನರ ಆಶೋತ್ತರಗಳನ್ನು ಈಡೇರಿಸಬೇಕು.


ವಿದ್ಯಾರ್ಥಿಗಳು ಭವಿಷ್ಯದ ಗುರಿಯನ್ನು ಇಟ್ಟುಕೊಳ್ಳುವುದರೊಂದಿಗೆ ಛಲದಿಂದ ಅದನ್ನು ನನಸಾಗಿಸಿಕೊಳ್ಳಬೇಕು. ಸದೃಢ ಭಾರತ ನಿರ್ಮಾಣ ಮಾಡಲು ಯುವಶಕ್ತಿ ಮುಂದಾಗಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶಪಾಲ್ ಸುವರ್ಣ, ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಜನತೆ ಹೊಂದಿದ್ದು, 30 ಕೋಟಿಗೂ ಹೆಚ್ಚು ಯುವಶಕ್ತಿ ನಮ್ಮಲ್ಲಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಗುಣಮಟ್ಟದ ಶಿಕ್ಷಣ ಪಡೆಯುವ ಜೊತೆಗೆ ಕ್ರೀಡೆ, ಕಲೆ ವ್ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ನಾಯಕತ್ವದ ಗುಣ ಬೆಳೆಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗುವ ಜೊತೆಗೆ ಸಮಾಜ ಸುಧಾರಣೆ ತರುವ ಮಾರ್ಗದಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಸಂವಿಧಾನದ ಪೀಠಿಕೆ ಬೋಧಿಸಿದರು.


ಕಾರ್ಯಕ್ರಮದಲ್ಲಿ ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ವೈ ರಾವ್, ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್ ಮೊದಲಾದವರಿದ್ದರು.


ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.