ಲೋಕಬಂಧು ನ್ಯೂಸ್ | ಉಡುಪಿ
ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ಅವರ ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಆಶೀರ್ವಾದದೊಂದಿಗೆ ಸಮಸ್ತ ಶಾಂಕರ ಅನುಯಾಯಿಗಳ ಆಶಯದಂತೆ ಎಂಜಿಎಂ ಕ್ರೀಡಾಂಗಣದಲ್ಲಿ ಡಿಸೆಂಬರ್ 28, 29 ಮತ್ತು 30ರಂದು ಹಮ್ಮಿಕೊಳ್ಳಲಾದ ಶ್ರೀಶಂಕರ ವಿಜಯೋತ್ಸವ ಕಾರ್ಯಕ್ರಮ ಪ್ರಯುಕ್ತ ಕುಂಜಿಬೆಟ್ಟು ಶ್ರೀಶಾರದಾ ಮಂಟಪದ ಮೊದಲ ಮಹಡಿಯಲ್ಲಿ ನೂತನ ಕಾರ್ಯಾಲಯವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಕಾರ್ಯಾಲಯ ಉದ್ಘಾಟಿಸಿದ ಶೃಂಗೇರಿ ಮಠದ ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಶಾಸ್ತ್ರಿ ಅವರು, ಶೃಂಗೇರಿ ಉಭಯ ಜಗದ್ಗುರುಗಳ ಆಶೀರ್ವಾದದೊಂದಿಗೆ ಶಂಕರ ಪೀಠದ ಸಮಸ್ತ ಭಕ್ತರ ಅಪೇಕ್ಷೆಯಂತೆ ಶ್ರೀ ಶಂಕರ ವಿಜಯೋತ್ಸವ ಕಾರ್ಯಕ್ರಮ ಜಗದ್ಗರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳ ದಿವ್ಯೋಪಸ್ಥಿತಿಯಲ್ಲಿ ನಡೆಯಲಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರನ್ನು ನಿರೀಕ್ಷಿಸಲಾಗುತ್ತಿದ್ದು ಸರ್ವ ಸಮಾಜದ ಶಂಕರ ಪೀಠದ ಅನುಯಾಯಿಗಳ ಉಪಸ್ಥಿತಿ ಮತ್ತು ಸಹಕಾರ ಅತ್ಯಗತ್ಯ ಎಂದರು.
ಶ್ರೀಶಂಕರ ವಿಜಯೋತ್ಸವ ಸಮಿತಿ ಕಾರ್ತಾಧ್ಯಕ್ಷರಾದ ಮಂಜುನಾಥ್ ಹೆಬ್ಬಾರ್ ಮತ್ತು ಮಹೇಶ್ ಠಾಕೂರ್, ಉಪಾಧ್ಯಕ್ಷ ರವಿ ಶೆಟ್ಟಿಗಾರ್, ಕೋಶಾಧಿಕಾರಿ ಹಾಗೂ ಕುಂಜಿಬೆಟ್ಟು ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಹೆಬ್ಬಾರ್, ವಿವಿಧ ಸಮಾಜದ ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಶಾನುಭಾಗ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು .
