ಸಾಮಾಜಿಕ ಕಾರ್ಯಕರ್ತ ಯು.ದಾಮೋದರ್ ನಿಧನ

ಲೋಕಬಂಧು ನ್ಯೂಸ್ | ಉಡುಪಿ
ಸಾಮಾಜಿಕ ಕಾರ್ಯಕರ್ತ ಯು.ದಾಮೋದರ್ (94) ನ.5ರಂದು ಗುರುವಾರ ನಿಧನರಾದರು.
ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತರಾದ ಮೇಲೆ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‍ನಲ್ಲೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದರು.


ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಪರ್ಯಾಯ ಸಮಿತಿಗಳಲ್ಲಿ ಪದಾಧಿಕಾರಿಯಾಗಿ, ಹಲವು ಸಂಘಸಂಸ್ಥೆಗಳ ಸದಸ್ಯರಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಉಡುಪಿಯ ಎಲ್ಲಾ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.


ಯಕ್ಷಗಾನ ಕಲಾರಂಗದ ಸ್ಥಾಪಕ ಸದಸ್ಯರಾಗಿ ದೀರ್ಘಕಾಲ ಸಂಸ್ಥೆಯೊಂದಿಗೆ ಸಕ್ರಿಯರಾಗಿದ್ದರು. ಸಂಸ್ಥೆ ಅವರಿಗೆ ಯಕ್ಷಗಾನ ಕಾರ್ಯಕರ್ತರಿಗೆ ನೀಡುವ ‘ಯಕ್ಷಚೇತನ’ ಪ್ರಶಸ್ತಿ ನೀಡಿ ಗೌರವಿಸಿತ್ತು.


ಯು.ದಾಮೋದರ್ ನಿಧನಕ್ಕೆ ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.