ನ.29ರಿಂದ 'ಕದಳೀ ವಿಶ್ವದರ್ಶನ' ರಾಷ್ಟ್ರೀಯ ಬಾಳೆ ಮೇಳ

ಲೋಕಬಂಧು ನ್ಯೂಸ್ | ಉಡುಪಿ
ಭಾವಿ ಪರ್ಯಾಯ ಸೋದೆ ಶ್ರೀವಾದಿರಾಜ ಮಠದ ಆಶ್ರಯದಲ್ಲಿ ಕದಳೀ ವಿಶ್ವದರ್ಶನ ರಾಷ್ಟ್ರ ಮಟ್ಟದ ಬಾಳೆ ಮೇಳ ನ.29ರಿಂದ ಡಿ.1ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ನಡೆಯಲಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಬಾಳೆ ಕೃಷಿಯ ಮಹತ್ವ, ಹೊಸ ತಳಿಗಳು, ವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವುದು ಮೇಳದ ಉದ್ದೇಶ.


ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಜಲಗಾಂವ್ ಸೇರಿದಂತೆ ವಿವಿಧ ಭಾಗಗಳ ರೈತರು ಮತ್ತು ಉದ್ಯಮಿಗಳು ಭಾಗವಹಿಸಲಿದ್ದಾರೆ. ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ (ಎನ್.ಆರ್.ಸಿ.ಬಿ) ಮತ್ತು ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿ.ಎಫ್.ಟಿ.ಆರ್.ಐ) ತಜ್ಞರೂ ಮಾಹಿತಿ ನೀಡಲಿದ್ದಾರೆ.


100 ಹೆಚ್ಚು ತಳಿಗಳ ಪ್ರದರ್ಶನ
ಮೇಳದಲ್ಲಿ 100ಕ್ಕೂ ಹೆಚ್ಚು ಬಾಳೆ ತಳಿಗಳ ಗೊನೆಗಳ ಪ್ರದರ್ಶನ, ಹಣ್ಣು ಮತ್ತು ಸಸಿಗಳ ಮಾರಾಟ, ಬಾಳೆ ನಾರು ಹಾಗೂ ಎಲೆಗಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಇರಲಿದೆ. ಸುಮಾರು 40 ಮಳಿಗೆಗಳಲ್ಲಿ ಕೃಷಿ ಉತ್ಪನ್ನಗಳು, ಸಂಸ್ಕರಿತ ಆಹಾರ ಮತ್ತು ಕೃಷಿ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ. ಬಾಳೆಹಣ್ಣು, ಬಾಳೆಕಾಯಿ ಬಳಸಿ ತಯಾರಿಸಿದ ತಿನಿಸುಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. 


ಮೂರು ದಿನಗಳಲ್ಲಿ ಸುಮಾರು ಎರಡು ಸಾವಿರ ರೈತರು, ಎರಡು ಸಾವಿರ ವಿದ್ಯಾರ್ಥಿಗಳು ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಶ್ರೀಪಾದರು ವಿವರಿಸಿದರು.


ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕೃಷಿ ಮಾಹಿತಿ ಉಪನ್ಯಾಸಗಳನ್ನೂ ಆಯೋಜಿಸಲಾಗಿದೆ. ರೈತರು ಹಾಗೂ ಉದ್ಯಮಿಗಳಿಗೆ ಮಳಿಗೆ ಮತ್ತು ಪ್ರದರ್ಶನದ ಮೂಲಸೌಕರ್ಯ ಉಚಿತವಾಗಿ ಒದಗಿಸಲಾಗುವುದು ಎಂದು ಶ್ರೀಪಾದರು ತಿಳಿಸಿದರು.


ವಿಶೇಷ ಉಪನ್ಯಾಸ
ಕದಳೀ ವಿಶ್ವದರ್ಶನ‌ ಕಾರ್ಯಕ್ರಮದಲ್ಲಿ ಪ್ರತಿದಿನ ವಿಷಯ ಪರಿಣಿತರಿಂದ ವಿಶೇಷ ಉಪನ್ಯಾಸ ನಡೆಯಲಿದೆ.
ನ.29ರ ಸಂಜೆ 5.30 ರಿಂದ 6.30ರ ತನಕ ಡಾ. ಪ್ರಸಾದ ರಾಮ ಹೆಗಡೆ, ಯಲ್ಲಾಪುರ.
(ಪ್ರಗತಿಪರ ರೈತ ಮತ್ತು ಬಾಳೆ ತಳಿಗಳ ಸಂರಕ್ಷಕ) ‘ಬಾಳು ಬೆಳಗಿಸುವ ಬಾಳೆ’ ಬಾಳೆ ತಳಿಗಳ ಮಹತ್ವ ಮತ್ತು ಉಳಿಸಿ ಬೆಳೆಸುವ ಬಗ್ಗೆ ತಿಳಿಸುವರು. ನವೀನ್ ಕುಮಾರ್ ರಚ್. ಎಂ., ಮೈಸೂರು (ಸಹ - ಸಂಸ್ಥಾಪಕ ಮತ್ತು ಕೃಷಿ ಉದ್ಯಮಿ / ಬಾ.ಕಾ.ಹು, ಅಭಯ್ ನ್ಯಾಚುರಲ್ ಫುಡ್ ಪ್ರೊಸೆಸಿಂಗ್ ಯೂನಿಟ್)
‘ಬಾ.ಕಾ.ಹು.- ಬಾಳೆ ಕಾಯಿ ಹುಡಿ, ಪೌಷ್ಟಿಕತೆಯ ಅಡಿ, ಆರೋಗ್ಯಕ್ಕೆ ಹಿಡಿ’ ( ಬಾ.ಕಾ.ಹು. - ಕೃಷಿಯಿಂದ ಕೈಗಾರಿಕೆಯ ಕ್ರಾಂತಿಯ ಕಥೆ )

ನ. 30ರಂದು ಸಂಜೆ 5‌‌.30 ರಿಂದ 6.30ರ ತನಕ ವರ್ಷಾ ಶ್ರೀಕಂಠಸ್ವಾಮಿ, ಚಾಮರಾಜನಗರ (ಸ್ಥಾಪಕ, ಆಕೃತಿ ಇಕೋ ಫ್ರೆಂಡ್ಲಿ ಎಂಟರ್ಪ್ರೈಸಸ್) ‘ಬಾಳೆಯ ಕಸಕ್ಕೆ ಹೊಸ ರೂಪ- ಇದು ಮನೆ ಬೆಳಗಿಸುವ ಆದಾಯದ ದೀಪ’ (ಬಾಳೆ ನಾರಿನ ಕೈಕಸುಬು, ಪರಿಸರ ಸ್ನೇಹಿ ಕಲೆ ಮತ್ತು ಸುಸ್ಥಿರ ಭವಿಷ್ಯ) ಅಶೋಕ್ ಮಂಜುನಾಥ ಹೆಗಡೆ,  ಶಿರಸಿ (ಸಂಸ್ಥಾಪಕ, ಕದಳೀವನ ನ್ಯಾಚುರಲ್ ಫುಡ್ಸ್ ) ‘ಬಾಳೆ ಸುಕೇಳಿ - ಮೂರು ತಲೆಮಾರಿನ ಪಯಣ’ (ಒಣಗಿಸಿದ ಬಾಳೆಹಣ್ಣಿನ ಮಹತ್ವ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಪದ್ಧತಿ)

ಡಿ.1ರಂದು ಸಂಜೆ 5.30ರಿಂದ 6.30ರ ತನಕ ಡಾ.ಟಿ. ಶ್ರೀಧರ ಬಾಯರಿ (ಆಯುರ್ವೇದ ವೈದ್ಯ, ವಿಜಯ ಕ್ಲಿನಿಕ್, ಉಡುಪಿ) ‘ಮನೆ ಅಂಗಳದ ಬಂಗಾರ, ಬಾಳೆಹಣ್ಣು ಆರೋಗ್ಯದ ಸಾಗರ’ (ಆಹಾರ ಮತ್ತು ಔಷಧಕ್ಕಾಗಿ ಬಾಳೆಯ ಕೊಡುಗೆ) ಡಾ.ಪಿ. ಸುರೇಶ್ ಕುಮಾರ್ (ಮುಖ್ಯ ವಿಜ್ಞಾನಿ, ರಾಷ್ಟ್ರೀಯ ಬಾಳೆಹಣ್ಣು ಸಂಶೋಧನಾ ಕೇಂದ್ರ, ತಮಿಳುನಾಡು) ‘ಬಾಳೆ ಕ್ಷೇತ್ರದಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ’ (ರಾಷ್ಟ್ರೀಯ ಬಾಳೆಹಣ್ಣು ಸಂಶೋಧನಾ ಕೇಂದ್ರದ ಕಾರ್ಯಗಳು ಮತ್ತು ಬಾಳೆ ಬೆಳೆಗಾರರಿಗೆ ಬೆಂಬಲ' ವಿಷಯ‌ ಕುರಿತು‌ ಮಾತನಾಡುವರು ಎಂದು ಶ್ರೀಪಾದರು ವಿವರಿಸಿದರು.

ಹೋಟೆಲ್‌ಗಳಲ್ಲೂ ಬಾಳೆ ಖಾದ್ಯ
ಬಾಳೆ ಮೇಳ ನಡೆಯುವ ಮೂರೂ ದಿನಗಳಲ್ಲಿ ಉಡುಪಿ ನಗರದ ಹೋಟೆಲ್‌ಗಳಲ್ಲೂ ಕನಿಷ್ಟ ಒಂದು ಬಗೆಯ ಬಾಳೆ ಖಾದ್ಯ ಸಿದ್ಧಪಡಿಸಲು ಹೋಟೆಲ್ ಮಾಲಕರಿಗೆ ವಿನಂತಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.


ಪ್ರಮುಖ ಆಕರ್ಷಣೆ
ಪ್ರಗತಿಪರ ಬಾಳೆ ಬೆಳೆಗಾರರು, 500ಕ್ಕೂ ಹೆಚ್ಚು ಬಾಳೆ ತಳಿಗಳ ಸಂರಕ್ಷಕರು ಹಾಗೂ ಕೃಷಿಕರ ಜ್ಞಾನ ವಿನಿಮಯ.

100ಕ್ಕೂ ಹೆಚ್ಚು ತಳಿಗಳ ಬಾಳೆಹಣ್ಣಿನ ಗೊನೆಗಳ ಪ್ರದರ್ಶನ.

150ಕ್ಕೂ ಹೆಚ್ಚು ಬಾಳೆಸಸಿ ತಳಿಗಳ ಪ್ರದರ್ಶನ ಮತ್ತು ಮಾರಾಟ.

ವಿವಿಧ ಬಗೆಯ ಬಾಳೆಹಣ್ಣುಗಳ ರುಚಿ ಸವಿಯುವಿಕೆ ಮತ್ತು ಮಾರಾಟ.

ಬಾ.ಕಾ.ಹು. ಪರಿಕಲ್ಪನೆಯ ಪರಿಚಯ ಹಾಗೂ ಬಾಳೆಕಾಯಿಹುಡಿ ಆಧಾರಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ.

ಒಣಗಿಸಿದ ಬಾಳೆಹಣ್ಣು (ಸುಕೇಳಿ) ತಯಾರಿಕೆಯ ಪರಂಪರೆಯ ಅನಾವರಣ- ಮೂರನೆಯ ತಲೆಮಾರಿನ ಕೊಡುಗೆ.

ಬಾಳೆಯ ಉಪಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಪದಾರ್ಥಗಳ 20ಕ್ಕೂ ಹೆಚ್ಚು ಮಳಿಗೆಗಳು

ತಮಿಳುನಾಡು, ಕೇರಳ ಹಾಗೂ ಮಲಬಾರ್ ಪರಂಪರೆಯ ಬಾಳೆ ಆಧಾರಿತ ನವೀನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ

ಭಾರತದ ಬಾಳೆ ರಾಜಧಾನಿ ಜಲಗಾಂವ್'ನ ವಿಶೇಷ ಕೃಷಿಕರು ಮತ್ತು ಉದ್ಯಮಿಗಳ ತಂಡದ ಆಗಮನ

ಬಾಳೆ ನಾರಿನಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ

ರಾಜ್ಯದ ನುರಿತ ಕರಕುಶಲ ಕಲಾವಿದರ ತಂಡದಿಂದ ಬಾಳೆ ನಾರಿನ ಕರಕುಶಲ ವಸ್ತುಗಳ ನೇರ ಪ್ರಾತ್ಯಕ್ಷಿಕೆ

ಬಾಳೆ ನಾರಿನಿಂದ ತಯಾರಿಸಿದ ಲೇಖನ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ

ಬಾಳೆ ನಾರಿನ ಜವಳಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ

ಹಾಂಗ್ಯೋ ಸಂಸ್ಥೆಯಿಂದ ಬಾಳೆಹಣ್ಣಿನ ನೂತನ ಐಸ್ ಕ್ರೀಮ್ ಲೋಕಾರ್ಪಣೆ

ನೇರ ಪಾಕಕಲೆ ಪ್ರದರ್ಶನ ಹಾಗೂ ಬಾಳೆ ಆಧಾರಿತ ಆಹಾರ ವೈವಿಧ್ಯಗಳ ಅನಾವರಣ

ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ ವತಿಯಿಂದ ಬಾಳೆ ಕುರಿತ ಸಂಶೋಧನೆ ಮತ್ತು ರೈತರಿಗೆ ಮಾರ್ಗದರ್ಶನ

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ವತಿಯಿಂದ ಬಾಳೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತಂತ್ರಜ್ಞಾನಗಳ ಪರಿಚಯ

ಸರ್ಕಾರಿ ಯೋಜನೆಗಳು ಮತ್ತು ರೈತರಿಗೆ ದೊರೆಯುವ ಸೌಲಭ್ಯಗಳ ಮಾಹಿತಿ

ಪರಿಸರಸ್ನೇಹಿ ಸಭಾವೇದಿಕೆ ಹಾಗೂ ಬಾಳೆತೋಟದ ನೈಜ ಅನುಭವ ನೀಡುವ ಆವರಣ

ಬಾಳೆ ದಿಂಡಿನ ಮಂಟಪ ಕಲಾಕೃತಿ ಹಾಗೂ ಶ್ರೀಕೃಷ್ಣನ ಪ್ರತಿಮೆಯ ವಿಶೇಷ ಆಕರ್ಷಣೆ

ಬಾಳೆತೋಟದ ಪರಿಕಲ್ಪನೆಯ ವಿಶೇಷ ಸೆಲ್ಫಿ ತಾಣ

ಬಾಳೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮೂರು ದಿನಗಳ ವಿಶೇಷ ಉಪನ್ಯಾಸ

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಸ್ವಾಮೀಜಿಗಳು, ಜನಪ್ರತಿನಿಧಿಗಳು ಹಾಗೂ ಗಣ್ಯರ ಉಪಸ್ಥಿತಿ

ಬಾಳೆ ಮುಹೂರ್ತದ ಹಿನ್ನೆಲೆಯಲ್ಲಿ ಒಂದು ಬಾಳೆ ತಳಿಯನ್ನು ಬ್ರ್ಯಾಂಡ್ ( ವಾಣಿಜ್ಯ ಮುದ್ರೆ ) ಮಾಡುವ ಘೋಷಣೆ

ಬಾಳೆಯ ಮಹತ್ವ, ವೈಶಿಷ್ಟ್ಯ ಮತ್ತು ಉಪಯುಕ್ತತೆ ಪರಿಚಯಿಸುವ ಕಿರುಪುಸ್ತಕದ ಲೋಕಾರ್ಪಣೆ


ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್ ಮತ್ತು ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್ ಪತ್ರಿಕಾಗೋಷ್ಟಿಯಲ್ಲಿದ್ದರು.