ಲೋಕಬಂಧು ನ್ಯೂಸ್ ಕಾರ್ಕಳ
ಇಲ್ಲಿನ ದಾನಶಾಲೆಯ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದಿನ ಗಣನೆ ಆರಂಭವಾಗಿದ್ದು, ಆ ಪ್ರಯುಕ್ತ ಭಾನುವಾರ ಬೆಳಿಗ್ಗೆ 8.35ರಿಂದ 8.55ರ ಶುಭ ಮುಹೂರ್ತದಲ್ಲಿ ಬಾಹುಬಲಿ ಸನ್ನಿಧಿಯಲ್ಲಿ ಅಟ್ಟಳಿಗೆ ನಿರ್ಮಾಣ ಕಾರ್ಯಕ್ಕೆ ಮುಹೂರ್ತ ನೆರವೇರಿಸಲಾಯಿತು.ಮುಂದಿನ 108 ದಿನಗಳಲ್ಲಿ ಮಹಾಮಸ್ತಕಾಭಿಷೇದ ಪೂರ್ವಸಿದ್ಧತಾ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕಾರ್ಯಗಳು ನಡೆಯಲಿದೆ.
ಅದಕ್ಕೂ ಮುನ್ನ ಬೆಳಿಗ್ಗೆ 7.30ರಿಂದ ಪಾದಾಭಿಷೇಕ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಬಾಹುಬಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಲಾಯಿತು. ನೂರಾರು ಮಂದಿ ಭಕ್ತರು ಹಾಗೂ ಗಣ್ಯರು ಭಾಗವಹಿಸಿದ್ದರು.
ಏಲಾಚಾರ್ಯ ಮುನಿಶ್ರೀ ಪ್ರಸಂಗಸಾಗರ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ಕಾರ್ಕಳ ಜೈನ ಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂ ಸೋಂದೆ ಜೈನ ಮಠದ ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮೂಡುಬಿದಿರೆ ಮೊದಲಾದವರಿದ್ದರು.
45 ದಿನದಲ್ಲಿ ಅಟ್ಟಳಿಗೆ ಪೂರ್ಣ
ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನಡೆಸಲು ಪೂರಕವಾಗಿರುವ ಅಟ್ಟಳಿಗೆ ನಿರ್ಮಾಣ ಕಾರ್ಯ ಮಾಣಿ ಮಹಾವೀರ್ ಇಂಡಸ್ಟ್ರೀಸ್ ವಹಿಸಿಕೊಂಡಿದ್ದು, ಮುಹೂರ್ತದೊಂದಿಗೆ ಆರಂಭಗೊಂಡಿರುವ ಈ ಕಾರ್ಯ ಒಂದೂವರೆ ತಿಂಗಳ ಕಾಲ ನಡೆಯಲಿದೆ. ಅಟ್ಟಳಿಗೆ ನಿರ್ಮಾಣ ಪೂರ್ಣಗೊಂಡ ಬಳಿಕ ಭಕ್ತರಿಗೆ ಅಟ್ಟಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.