'ಭಾರತದ ಬಲ ಕರ್ನಾಟಕ’ ಪರಿಕಲ್ಪನೆಯೊಂದಿಗೆ ಬೆಳೆಯೋಣ

ಲೋಕಬಂಧು ನ್ಯೂಸ್ ಬೆಂಗಳೂರು
'ಭಾರತದ ಬಲ ಕರ್ನಾಟಕ’ ಎಂಬ ಪರಿಕಲ್ಪನೆಯೊಂದಿಗೆ ರಾಜ್ಯವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ದೂರದೃಷ್ಟಿಯಾಗಿದೆ. ಕನ್ನಡ ಭಾಷೆ ಎಐ, ವಿಜ್ಞಾನ, ಸ್ಟಾರ್ಟ್‌ಅಪ್‌ ಹಾಗೂ ಡಿಜಿಟಲ್ ತಂತ್ರಜ್ಞಾನದ ಭಾಷೆಯಾಗಿ ಬೆಳೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶಯ ವ್ಯಕ್ತಪಡಿಸಿದರು.ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, 71‌ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.


ರಾಷ್ಟ್ರಧ್ವಜದ ಕೆಳಗೆ ನಾಡಧ್ವಜ ಹಾರಾಡುವಂತಾಗಬೇಕು. ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದ್ದು, ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕನ್ನಡದ ವಿಚಾರದಲ್ಲಿ ಪಕ್ಷಭೇದ, ರಾಜಕೀಯ ಇರಬಾರದು. ಕನ್ನಡಿಗರ ಹಕ್ಕು ಮತ್ತು ಗೌರವ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.


ಬೆಂಗಳೂರು ವೈವಿಧ್ಯಮಯ ಸಂಸ್ಕೃತಿಯ ನಗರವಾಗಿದ್ದು, 107 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಕನ್ನಡದ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅನ್ಯಭಾಷೆಗಳಿಗೆ ಗೌರವ ನೀಡುವುದರ ಜೊತೆಗೆ ಕನ್ನಡಕ್ಕೆ ಆದ್ಯತೆ ನೀಡಬೇಕು. ರಾಜ್ಯದ ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶದಲ್ಲಿ ಆದ್ಯತೆ ನೀಡಬೇಕು ಎಂದರು.


ಕಚೇರಿ, ವ್ಯಾಪಾರ ಹಾಗೂ ಸಾರ್ವಜನಿಕ ಜೀವನದಲ್ಲಿ ಕನ್ನಡ ಸಹಜವಾಗಿ ಬಳಕೆಯಾಗಬೇಕು. ಕನ್ನಡ ಕಲಿಯುವ ಮತ್ತು ಬಳಸುವ ವಾತಾವರಣ ನಿರ್ಮಾಣವಾಗಬೇಕು. ಕನ್ನಡದ ಬಲದೊಂದಿಗೆ ಜಗತ್ತನ್ನು ಗೆಲ್ಲುವ ಸಂಕಲ್ಪ ನಮ್ಮದಾಗಲಿ ಎಂದರು.


ಕರ್ನಾಟಕ ಏಕೀಕರಣ ಮತ್ತು ಕರ್ನಾಟಕ ನಾಮಕರಣದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಸ್ಮರಿಸಿದ ಅವರು, ಕನ್ನಡ ಭಾಷೆ ಮತ್ತು ನಾಡಿನ ಬೆಳವಣಿಗೆಗೆ ಶ್ರಮಿಸಿದ ಮಹನೀಯರನ್ನು ನೆನೆದರು.


ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಾಧನೆಗಳನ್ನು ಶ್ಲಾಘಿಸಿ, ಕನ್ನಡದ ಕೀರ್ತಿ ಹೆಚ್ಚಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.


ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆ ಸಚಿವ ಶಿವರಾಜ್ ತಂಗಡಗಿ ಮೊದಲಾದವರಿದ್ದರು.