ನಾಡಿನ ಪರಂಪರೆಯ ರಕ್ಷಣೆ ಎಲ್ಲರ ಹೊಣೆ

ಲೋಕಬಂಧು ನ್ಯೂಸ್ ಕಾಪು
ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ವೀರರು, ಜ್ಞಾನಿಗಳು, ಆಡಳಿತ ಕುಶಲರು, ಪಂಡಿತರು ಕಲಾವಿದರಾದಿಯಾಗಿ ಎಲ್ಲರೂ ನಿರಂತರವಾಗಿ ಬೆಳಗಿಸಿದ ಧೀಮಂತ ನಾಡು ನಮ್ಮದು. ಈ ನೆಲದ ಜಲ, ಭಾಷೆ, ನಾಡು- ನುಡಿ, ಸಂಸ್ಕೃತಿಗಳನ್ನು ಕಾಪಾಡಿಕೊಂಡು ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಪಸರಿಸುವುದು ನಮ್ಮೆಲ್ಲರ ಕರ್ತವ್ಯ. ನಾಡಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕಾಪು ತಹಶೀಲ್ದಾರ್ ಅನಂತಶಂಕರ ಬಿ. ಹೇಳಿದರು.ಕಾಪು ತಾಲೂಕು ಆಡಳಿತ ವತಿಯಿಂದ ಭಾನುವಾರ ನಡೆದ ಕಾಪು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕನ್ನಡಿಗರ ಸ್ವಾಭಿಮಾನವನ್ನು ಜಾಗೃತಗೊಳಿಸುವ ಜೊತೆಗೆ ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ಏಕೀಕರಣ ಚಳವಳಿಯ ಫಲವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯದ ಏಕತೆ, ಸಮೃದ್ಧಿ ಹಾಗೂ ಸಾಮರಸ್ಯವನ್ನು ಉಳಿಸಿಕೊಂಡು ಅಭಿವೃದ್ಧಿ ಹೊಂದಿದ ನಾಡನ್ನು ಕಟ್ಟುವ ಸಂಕಲ್ಪ ನಮ್ಮದಾಗಬೇಕು ಎಂದರು.


ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನೀಲಾನಂದ ನಾಯ್ಕ್ ಪ್ರಧಾನ ಭಾಷಣ ಮಾಡಿದರು.


ಕಾಪು ಪುರಸಭಾಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಸರಿತಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಕಾಪು ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಮೇಸ್ತ, ಸರಕಾರಿ ನೌಕರರ ಸಂಘದ ಕಾಪು ತಾಲೂಕು ಅಧ್ಯಕ್ಷ ಬಸವರಾಜ್, ಕ್ಷೇತ್ರ ಶಿಕ್ಷಣ ಸಂಯೋಜಕಿ ಅಶ್ವಿನಿ, ಪುರಸಭಾ ಸದಸ್ಯರಾದ ಫರ್ಜಾನಾ, ನೂರುದ್ದೀನ್, ಶೋಭಾ ಬಂಗೇರ, ರಾಧಿಕಾ, ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ವಿದ್ಯಾಲತಾ, ಸರಿತಾ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಈ ಬಾರಿಯ ಎಸ್ಎಸ್‌ಎಲ್‌ಸಿ ಕನ್ನಡ ಪರೀಕ್ಷೆಯಲ್ಲಿ 125 ಅಂಕ ಗಳಿಸಿದ ಧನುಶ್ರೀ, ತೃಷಾ, ಪೂರ್ವಿ ಮತ್ತು ಸಾನ್ವಿ ಜಿ. ಆಚಾರ್ಯ ಅವರನ್ನು ಅಭಿನಂದಿಸಲಾಯಿತು.



32 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಗ್ರಾಮ ಸಹಾಯಕ ಸ್ಪ್ಯಾನಿ ಡಿ'ಸೋಜ ಬೆಳ್ಳೆ ಅವರನ್ನು ಗೌರವಿಸಲಾಯಿತು.


ಪೊಲೀಸ್, ಎನ್‌ಸಿಸಿ, ಸೇವಾದಳ, ಸೌಟ್ಸ್- ಗೈಡ್ಸ್ ಮಕ್ಕಳಿಂದ ಪಥಸಂಚಲನ, ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.


ಕಾಪು ತಾ.ಪಂ. ಕಾರ್ಯನಿರ್ವಹಣಾಧಿ ಕಾರಿ ವಿಜಯ ಕುಮಾರ್ ಸ್ವಾಗತಿಸಿದರು. ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿದರು. ಕಾಪು ಪುರಸಭೆ ಮುಖ್ಯಾಧಿಕಾರಿ ಎನ್‌.ಎಂ. ಮೇಸ್ತ ವಂದಿಸಿದರು.