ಲೋಕಬಂಧು ನ್ಯೂಸ್, ಮಣಿಪಾಲ
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸರಕಾರಿ ಕಚೇರಿಗಳಿಗೆ ಬಂದಾಗ ಅದಕ್ಕೆ ಸ್ಪಂದಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸುವುದಿಲ್ಲ ಸರಿಯಲ್ಲ. ಒಂದೊಮ್ಮೆ ನಿರ್ಲಕ್ಷ್ಯ ವಹಿಸುವುದು ಕಂಡುಬಂದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಗುವುದು ಎಂದು ರಾಜ್ಯದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಸಿದರು.ಇಲ್ಲಿನ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರ ಕೆಲಸಗಳನ್ನು ನಿಯಮಾನುಸಾರ ನಿಮ್ಮ ಹಂತದಲ್ಲಿಯೇ ಮಾಡಿಕೊಡಲು ಸಾಧ್ಯವಿದ್ದಲ್ಲಿ ಕೂಡಲೇ ಸ್ಪಂದಿಸಬೇಕು. ಒಂದೊಮ್ಮೆ ಸರಕಾರದ ಹಂತದಲ್ಲಿ ಆಗುವಂತಿದ್ದಲ್ಲಿ ಮೇಲಧಿಕಾರಿ ಅಥವಾ ಜನಪ್ರತಿನಿಧಿಗಳ ಗಮನಕ್ಕೆ ತಂದಲ್ಲಿ ನಾವು ಅದಕ್ಕೆ ಸ್ಪಂದಿಸುತ್ತೇವೆ. ಒಂದಕ್ಕೂ ಹೆಚ್ಚು ಇಲಾಖೆಗಳಲ್ಲಿ ಕೆಲಸವಾಗಬೇಕಿದ್ದಲ್ಲಿ ಸಮನ್ವಯದೊಂದಿಗೆ ಕೆಲಸ ಕಾರ್ಯ ಮಾಡಬೇಕು. ಒಬ್ಬರು ಇನ್ನೊಬ್ಬರ ಮೇಲೆ ಹೇಳುವುದು ಸರಿಯಲ್ಲ ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆಯ ಕೊರತೆ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆಗಳಿದ್ದು, ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇವೆ. ಈ ಬಗ್ಗೆ ಈಗಿನಿಂದಲೇ ಎಚ್ಚರ ವಹಿಸಬೇಕು. ಕಿಂಡಿ ಆಣೆಕಟ್ಟುಗಳಿಗೆ ಹಲಗೆ ಅಳವಡಿಸಬೇಕು. ಪ್ರಸ್ತುತ ಮಳೆ ಬರುತ್ತಿರುವ ಬಗ್ಗೆಯೂ ಎಚ್ಚರದಿಂದಿರಬೇಕು ಎಂದರು.
ಕಂದಾಯ ಇಲಾಖೆಯಲ್ಲಿ ನಮೂನೆ 53, 54 ಹಾಗೂ 94ಸಿನಲ್ಲಿ ಸಾರ್ವಜನಿಕರು ಜಮೀನು ಹಾಗೂ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದು, ಕಳೆದ ಎರಡು ವರ್ಷಗಳಿಂದ ಅವುಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅರ್ಜಿಗಳು ಪೋರ್ಟಲ್'ಗಳಲ್ಲಿ ಸರಿಯಾಗಿ ನಮೂದಾಗದಿರುವುದೂ ವಿಲೇವಾರಿಗೆ ಸಮಸ್ಯೆ ಉಂಟಾಗುತ್ತಿದೆ. ಆ ಬಗ್ಗೆ ಅಗತ್ಯ ಕ್ರಮವಹಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲಿಸಬೇಕು ಎಂದರು.
108 ಆಂಬುಲೆನ್ಸ್'ಗಳ ನಿರ್ವಹಣೆ ಸಿಬ್ಬಂದಿಗಳ ಸಮಸ್ಯೆ ಶೀಘ್ರ ಬಗೆಹರಿಸಲಾಗುವ್ಯದು. ಪ್ರಸ್ತುತ ಇರುವ ಸಿಬ್ಬಂದಿಗಳನ್ನು ಬಳಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಲು ಯೋಜನೆ ರೂಪಿಸಲು ತಿಳಿಸಿದರು.
ಡೀಮ್ಡ್ ಫಾರೆಸ್ಟ್ ಸರ್ವೇ ಕಾರ್ಯ ಆದ್ಯತೆಯ ಮೇಲೆ ಕೈಗೊಂಡು ಪೂರ್ಣಗೊಳಿಸಬೇಕು. ಕುಡಿಯುವ ನೀರು ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅನುಮತಿ ಪ್ರಸ್ತಾವನೆಯನ್ನು ಆದ್ಯತೆಯಲ್ಲಿ ನೀಡಬೇಕು.
ಶಾಲೆಗಳ ದುರಸ್ಥಿ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಬೇಕು. ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ವಿತರಣೆ ಕಾಲ ಕಾಲಕ್ಕೆ ಆಗಬೇಕು.
ಗುಣಮಟ್ಟದ ಶೂಗಳ ವಿತರಣೆಗೆ ಕ್ರಮವಹಿಸಬೇಕು. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಪ್ರತಿಶತ ನೂರರಷ್ಟು ಹಾಜರಾತಿ ಇರುವಂತೆ ನೋಡಿಕೊಳ್ಳುವ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ವಾರಾಹಿ ಯೋಜನೆಯಡಿ ರೈತರಿಗೆ ನೀರಾವರಿ ಯೋಜನೆ, ಹೆಜಮಾಡಿ ಬಂದರು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಮುದ್ರ ಕೊರೆತ ಕಾಮಗಾರಿಗೆ ಲಭ್ಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಹಾಗೂ ಡಾ.ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿ.ಎಫ್.ಓ ರುಥ್ರೇನ್ ಮೊದಲಾದವರಿದ್ದರು.