ಸೋದೆ ಪರ್ಯಾಯ: ಬಾಳೆ ಮುಹೂರ್ತ ಪೂರ್ವಸಿದ್ಧತೆ ಸಭೆ

ಲೋಕಬಂಧು ನ್ಯೂಸ್‌ ಉಡುಪಿ
ಭಾವಿ ಪರ್ಯಾಯ ಸೋದೆ ಶ್ರೀ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯ ಹಿನ್ನೆಲೆಯಲ್ಲಿ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಪ್ರಥಮದ್ದಾದ ಬಾಳೆ ಮುಹೂರ್ತ ನವೆಂಬರ್ 29ರಂದು ನಡೆಯಲಿದ್ದು, ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆ ಸೋಮವಾರ ಇಲ್ಲಿನ ರಥಬೀದಿಯ ಸೋದೆ ಮಠದಲ್ಲಿ ನಡೆಯಿತು.ಸಭೆಯಲ್ಲಿ ಶ್ರೀ ಮಠದ ಪ್ರಮುಖ ಶಿಷ್ಯವರ್ಗವಾದ ಕೋಟೇಶ್ವರ ಮಾಗಣೆ ಪ್ರಮುಖರು, ಗ್ರಾಮದ ಪ್ರಮುಖರು, ದೈವಜ್ಞ ಬ್ರಾಹ್ಮಣ ವರ್ಗದ ಪ್ರಮುಖರು ಹಾಗೂ ಶ್ರೀಮಠದ ಅನೇಕ ಭಕ್ತರು ಉಪಸ್ಥಿತರಿದ್ದರು.


ಬಾಳೆ ಮುಹೂರ್ತ ಅಂಗವಾಗಿ ಕೈಗೊಳ್ಳಬೇಕಾದ ವಿವಿಧ ಪೂರ್ವಸಿದ್ಧತೆಗಳು, ಕಾರ್ಯಕ್ರಮಗಳ ವ್ಯವಸ್ಥೆ ಹಾಗೂ ಮುಹೂರ್ತ ಪ್ರಯುಕ್ತ ಆಯೋಜಿಸಲು ಉದ್ದೇಶಿಸಿರುವ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.


ಯಶಸ್ವಿ ಕಾರ್ಯಕ್ರಮ ಆಯೋಜನೆಗಾಗಿ ಅಗತ್ಯವಿರುವ ಸಿದ್ಧತೆ ಹಾಗೂ ಜವಾಬ್ದಾರಿ ಹಂಚಿಕೆ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.


ಮಠದ ಪೀಠಾಧಿಪತಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.


ಶ್ರೀಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಸೋದೆ ಮಠ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್, ಯಕ್ಷಗಾನ ಕಲಾರಂಗ‌ ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಮತ್ತು ಜೊತೆ ಕಾರ್ಯದರ್ಶಿ ನಾರಾಯಣ ಹೆಗಡೆ ಹಾಗೂ ಮಠದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.