ಲೋಕಬಂಧು ನ್ಯೂಸ್ ಉಡುಪಿ, ಏ.21
ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶ್ರೇಷ್ಠ ಮಹಾಪುರುಷರೆಂದು ಗುರುತಿಸಲ್ಪಟ್ಟವರಲ್ಲಿ ಶಂಕರಾಚಾರ್ಯರು ಪ್ರಮುಖರಾಗಿದ್ದು, ಸನಾತನ ಧರ್ಮ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಅದ್ವೈತ ಸಿದ್ಧಾಂತ ಪ್ರತಿಪಾದಿಸಿರುವ ಅವರ ಆದರ್ಶ ಚಿಂತನೆ ಹಾಗೂ ವಿವೇಚನೆಗಳು ಮನುಕುಲದ ಒಳಿತಿಗೆ ದಾರಿದೀಪವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕೇರಳದ ಕಾಲಟಿಯಲ್ಲಿ ಜನಿಸಿದ ಶಂಕರಾಚಾರ್ಯರು ಸನಾತನ ಧರ್ಮ ಹಾಗೂ ಸಂಸ್ಕೃತಿ ರಕ್ಷಣೆಗಾಗಿ ಉತ್ತರದ ಬದರಿ, ದಕ್ಷಿಣದ ಶೃಂಗೇರಿ, ಪೂರ್ವದ ಪುರಿ ಮತ್ತು ಪಶ್ಚಿಮದ ದ್ವಾರಕಾಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದ್ದಾರೆ. ಶಂಕರಾಚಾರ್ಯರೆಂಬ ಜ್ಞಾನದ ಗಣಿ ಕೇವಲ 32 ವರ್ಷ ಕಾಲ ಬದುಕಿದ್ದರೂ ತಮ್ಮ ಜೀವಿತಾವಧಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದರು.
ಓರ್ವ ವ್ಯಕ್ತಿ ಒಂದು ಶಕ್ತಿಯಾಗಿ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂಬುದಕ್ಕೆ ಶಂಕರಾಚಾರ್ಯರು ಸೂಕ್ತ ನಿದರ್ಶನ. ಎಲ್ಲಾ ಜಾತಿ, ಧರ್ಮದವರು ಒಂದಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತೋರಿಸಿಕೊಟ್ಟ ಶಂಕರಾಚಾರ್ಯರ ಆದರ್ಶಗಳನ್ನು ಮುಂದಿನ ಪೀಳಿಗೆ ಪಾಲಿಸುವಂತಾಗಬೇಕು ಎಂದು ಸಂಸದ ಕೋಟ ಆಶಿಸಿದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಜಯಶಂಕರ ಕಂಗಣ್ಣಾರು ಉಪನ್ಯಾಸ ನೀಡಿ, ಆಧ್ಯಾತ್ಮ ಲೋಕಕ್ಕೆ ಚೈತನ್ಯ ನೀಡಿದ ಆದಿಗುರು ಶ್ರೀ ಶಂಕರಾಚಾರ್ಯರು ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದಾರೆ. ವೇದ, ಉಪನಿಷತ್ತು, ಗೀತೆಗಳಿಗೆ ಭಾಷ್ಯ ಬರೆದು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಹಲವಾರು ಗ್ರಂಥರಚನೆ ಮಾಡಿ ಸಾಹಿತ್ಯಲೋಕಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಪಂಚಾಯತನ ಪೂಜಾ ಕ್ರಮ ರೂಪಿಸಿ, ವ್ಯಕ್ತಿ- ವ್ಯಕ್ತಿಯಲ್ಲಿ ಅಭೇದವನ್ನು ಪ್ರತಿಪಾದಿಸಿದರು.
ರಾಷ್ಟ್ರೀಯ ಭಾವೈಕ್ಯತೆಯನ್ನು ಪ್ರತಿಪಾದಿಸಿದ ಶಂಕರಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಅನುಸರಿಸಿ ಪ್ರತಿಯೊಬ್ಬರೂ ದ್ವೇಷ, ಅಸೂಯೆ ಎಂಬ ಭಾವನೆಯನ್ನು ಮರೆತು ಸತ್ಯದ ಹಾದಿಯಲ್ಲಿ ಸಾಗಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಎ.ಎಸ್.ಪಿ ಸುಧಾಕರ್ ನಾಯಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಸಮುದಾಯದ ಬಾಂಧವರು ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿದರು. ವಿಶ್ವನಾಥ ಶಾನುಭಾಗ್ ವಂದಿಸಿದರು.